ಕೊಪ್ಪ: ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಮೃತ್ಯು; ಆರೋಪ

Update: 2020-02-04 17:47 GMT

ಚಿಕ್ಕಮಗಳೂರು, ಫೆ.4: ವೈದ್ಯರ ನಿರ್ಲಕ್ಷ್ಯದಿಂದಾಗಿ ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ವರದಿಯಾಗಿದೆ.

ಕೊಪ್ಪ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿರುವ ಉಷಾ ಎಂಬವರು ಮೃತಪಟ್ಟಿರುವ ಮಹಿಳೆಯಾಗಿದ್ದು, ಗರ್ಭಿಣಿ ಉಷಾ ಪೋಷಕರು ಚೊಚ್ಚಲ ಹೆರಿಗೆ ನಿಮಿತ್ತ ಇತ್ತೀಚೆಗೆ ಕೊಪ್ಪ ಪಟ್ಟಣದ ಸರಕಾರಿ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು. ಮಂಗಳವಾರ ಬೆಳಗ್ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಉಷಾ ಅವರನ್ನು ವಾರ್ಡ್‍ನಿಂದ ಹೆರಿಗೆ ಕೊಠಡಿಗೆ ಸ್ಥಳಾಂತರಿಸಲಾಗಿತ್ತು, ಈ ವೇಳೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಎಂಬವರು ಉಷಾ ಅವರನ್ನು ತಪಾಸಣೆ ಮಾಡಿದ್ದು, ಹೆರಿಗೆಯ ನಂತರ ಆಸ್ಪತ್ರೆಯ ನರ್ಸ್‍ಗಳಿಗೆ ನೋಡಿಕೊಳ್ಳಲು ಹೇಳಿ ಮನೆಗೆ ಹೋಗಿದ್ದಾರೆ.

ವೈದ್ಯರು ಮನೆಗೆ ಹೋದ ಬಳಿಕ ತೀವ್ರ ರಕ್ತಸ್ರಾವದಿಂದ ಉಷಾ ನರಳಾಡುತ್ತಿದ್ದರೂ ವೈದ್ಯರು ಬಾರದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ತಿಳಿದು ಬಂದಿದ್ದು, ಹೆಚ್ಚು ಕಾದರೆ ಜೀವಕ್ಕೆ ಅಪಾಯ ಎಂದು ಭಾವಿಸಿದ ಉಷಾ ಕುಟುಂಬದವರು ಕೂಡಲೇ ಆವರನ್ನು ಶಿವಮೊಗ್ಗಕ್ಕೆ ಆಂಬುಲೆನ್ಸ್ ಮೂಲಕ ಕರೆದೊಯ್ಯಿದ್ದಾರೆ. ಆದರೆ ಮಾರ್ಗಮಧ್ಯೆ ಉಷಾ ತೀವ್ರ ರಕ್ತಸ್ರಾವ, ಹೊಟ್ಟೆ ನೋವಿನಿಂದ ಬಳಲಿ ಆಂಬುಲೆನ್ಸ್ ನಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.

ಘಟನೆಯ ಬಳಿಕ ಉಷಾ ಕುಟುಂಬದವರು ಮೃತದೇಹವನ್ನು ಕೊಪ್ಪ ಪಟ್ಟಣದ ಸರಕಾರಿ ತಾಲೂಕು ಆಸ್ಪತ್ರೆ ಮುಂದೆ ಇರಿಸಿ ಕೆಲ ಹೊತ್ತು ಧರಣಿ ನಡೆಸಿದ್ದು, ನಂತರ ವೈದ್ಯ ಡಾ.ಬಾಲಕೃಷ್ಣ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News