ಪುರುಷ ಸೈನಿಕರು ಮಹಿಳಾ ಅಧಿಕಾರಿಗಳನ್ನು ಒಪ್ಪಿಕೊಳ್ಳುತ್ತಿಲ್ಲ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರಕಾರ ಮಾಹಿತಿ

Update: 2020-02-05 07:13 GMT

ಹೊಸದಿಲ್ಲಿ, ಫೆ.5: ಭಾರತೀಯ ಸೇನೆಯಲ್ಲಿ ಪುರುಷ ಸೈನಿಕರು ಮಹಿಳೆಯರನ್ನು ಅಧಿಕಾರಿಗಳನ್ನಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಜತೆಗೆ ಮಹಿಳಾ ಅಧಿಕಾರಿಗಳನ್ನು ಯುದ್ಧ ಕೈದಿಗಳನ್ನಾಗಿ ಒಯ್ಯುವ ಅಪಾಯವೂ ಇದೆ ಎಂದು ಹೇಳಿದೆ.

ಸೇನೆಯಲ್ಲಿ ಅಧಿಕಾರಕ್ಕೆ ಸೇರಿದ ಬಳಿಕ ಕಮಾಂಡ್ ನಿಯೋಜನೆಗೆ ನೇಮಕ ಮಾಡಬೇಕು ಎಂಬ ಕೆಲ ಮಹಿಳಾ ಅಧಿಕಾರಿಗಳ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದೆ. "ಸೇನೆಯಲ್ಲಿ ಬಹುತೇಕ ಪುರುಷರೇ ಇದ್ದಾರೆ ಹಾಗೂ ಬಹುತೇಕ ಇವರೆಲ್ಲರೂ ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಸಾಮಾಜಿಕ ರೂಢಿಯ ಹಿನ್ನೆಲೆಯಲ್ಲಿ ಮಹಿಳೆಯರನ್ನು ಅಧಿಕಾರ ಸ್ಥಾನದಲ್ಲಿ ಸ್ವೀಕರಿಸುವ ಮನೋಸ್ಥಿತಿಯನ್ನು ಸೈನಿಕರು ಇನ್ನೂ ಹೊಂದಿಲ್ಲ" ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮಹಿಳೆಯರ ದೈಹಿಕ ದೃಢತೆ ಮತ್ತು ಅವಕಾಶಗಳು ಪುರುಷರಿಗಿಂತ ಭಿನ್ನವಾಗಿರುವ ಕಾರಣದಿಂದ ನಿಯೋಜನೆಯಲ್ಲಿ ಮಹಿಳಾ ಅಧಿಕಾರಿಗಳನ್ನು ಪುರುಷ ಅಧಿಕಾರಿಗಳಿಗೆ ಸಮಾನವಾಗಿ ಪರಿಗಣಿಸಲಾಗದು. ಜತೆಗೆ ಯುದ್ಧ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗಳನ್ನು ಮುಂದಿಡುವುದಕ್ಕೆ ವಿರೋಧವಿದೆ" ಎಂದು ಹೇಳಿದೆ.

ಹಿರಿಯ ವಕೀಲ ಆರ್.ಬಾಲಸುಬ್ರಹ್ಮಣ್ಯನ್ ಮತ್ತು ವಕೀಲ ನೀಲಾ ಗೋಖಲೆಯವರು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ಪೀಠದ ಮುಂದೆ ವಾದ ಮಂಡಿಸಿ, ಮಹಿಳೆಯರನ್ನು ಇಂಥ ಹುದ್ದೆಗಳಿಗೆ ನಿಯೋಜಿಸುವುದರಿಂದ ಸಶಸ್ತ್ರಪಡೆಗಳ ಕ್ರಿಯಾಶೀಲತೆ ಬದಲಾಗುತ್ತದೆ. ಬಂಧನ, ಮಾತೃತ್ವ ಮತ್ತು ಮಕ್ಕಳ ಆರೈಕೆಯಂಥ ಸೂಕ್ಷ್ಮ ವಿಷಯಗಳಿಂದಾಗಿ ಬೌದ್ಧಿಕ ಇತಿಮಿತಿಯನ್ನೂ ಪರಿಗಣಿಸಬೇಕಾಗುತ್ತದೆ ಎಂದು ವಿವರಿಸಿದರು.

ಮಹಿಳಾ ಅಧಿಕಾರಿಗಳ ಪರವಾಗಿ ವಾದಿಸಿದ ಮೀನಾಕ್ಷಿ ಲೇಖಿ ಮತ್ತು ಐಶ್ವರ್ಯಾ ಭಟ್ಟಿಯವರು ಕೇಂದ್ರದ ವಾದವನ್ನು ವಿರೋಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News