ಶಾಹೀನ್ ಸಂಸ್ಥೆ ವಿರುದ್ಧದ ದೇಶದ್ರೋಹ ಪ್ರಕರಣ ಹಿಂಪಡೆಯಲು ವಿ.ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಆಗ್ರಹ

Update: 2020-02-05 11:42 GMT

ಬೀದರ್, ಫೆ.5: ಜಿಲ್ಲೆಯ ಜನಪರ ಕಾಳಜಿ ಮತ್ತು ಅಭಿವೃದ್ಧಿ ಪರ ಕೆಲಸ ಮಾಡುತ್ತಿರುವ ಶಾಹೀನ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಮಕ್ಕಳು ಮಾಡಿದ ಅಣುಕು ಪ್ರದರ್ಶನವನ್ನೇ ನೆಪ ಮಾಡಿಕೊಂಡು ಶಿಕ್ಷಣ ಸಂಸ್ಥೆಯನ್ನೇ ಗುರಿಯಾಗಿಟ್ಟು, ಅವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲು ಮಾಡಿದ್ದು ಸಮಂಜಸವಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ತಿಳಿಸಿದ್ದಾರೆ. 

ಇತ್ತೀಚೆಗೆ ಶಾಹೀನ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಪುಟ್ಟ ಪಕ್ಕಳು ನಾಟಕ ಪ್ರದರ್ಶನ ಮಾಡುತ್ತಿರುವ ಸಂದರ್ಭದಲ್ಲಿ ಪ್ರಧಾನಿಗೆ ಅಗೌರವ ತೋರಿಸಿದ್ದಾರೆಂಬ ಕಾರಣಕ್ಕಾಗಿ ಆ ಶಿಕ್ಷಣ ಸಂಸ್ಥೆಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಬೀದರ್ ಜಿಲ್ಲೆಯಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ಜಾತ್ಯತೀತವಾಗಿ ಶಿಕ್ಷಣ ಹಾಗೂ ದೇಶ ಭಕ್ತಿ, ಶಿಸ್ತು ಕಲಿಸಲಾಗುತ್ತಿದೆ. ಈ ಶಿಕ್ಷಣ ಸಂಸ್ಥೆಯಿಂದ ಅನೇಕ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣಕ್ಕಾಗಿ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಬೀದರ್ ಜಿಲ್ಲೆಗೆ ಕೀರ್ತಿ ತಂದಿದೆ. ಗಣರಾಜ್ಯೋತ್ಸವ ದಿನದಂದು ನಾಟಕ ಪ್ರದರ್ಶನದಲ್ಲಿ ನಡೆದಿದೆ ಎನ್ನಲಾದ ಪ್ರಮಾದಕ್ಕೆ ಶಿಕ್ಷಣ ಸಂಸ್ಥೆಯ ವಿರುದ್ಧ ಮತ್ತು ಸುದ್ದಿ ಸಂಗ್ರಹ ಮಾಡಲು ಹೋದ ಸುದ್ದಿಗಾರರು, ಛಾಯಾ ಗ್ರಾಹಕರು, ಮಕ್ಕಳ ಪಾಲಕರ ವಿರುದ್ಧ ಇಂತಹ ಪ್ರಕರಣ ದಾಖಲಿಸಿರುವುದು ಸೂಕ್ತವಾದುದಲ್ಲ. ಈ ದೇಶದ ಪ್ರಧಾನಿಗಳ ಬಗ್ಗೆ ಅಗೌರವ ತೋರಿಸಿರುವುದು ಖಂಡನೀಯವಾದದ್ದು. ಅದಕ್ಕೆ ಇಂತಹ ದೊಡ್ಡ ಪ್ರಮಾಣದ ಪ್ರಕರಣ ದಾಖಲು ಮಾಡಿರುವುದು ಸೂಕ್ತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಪ್ಪು ಮಾಡಿದ್ದರೆ ಅವರಿಗೆ ಎಚ್ಚರಿಕೆ ನೀಡಿ ಮುಂದೆ ಇಂತಹ ಘಟನೆ ಮರುಕಳಿಸದಂತೆ ತಾಕೀತು ಮಾಡಬಹುದಿತ್ತು ಎಂದು ತಿಳಿಸಿದ ಅರವಿಂದಕುಮಾರ ಅರಳಿ ಅವರು, ಮಕ್ಕಳ ಪಾಲಕರ ವಿರುದ್ಧ ದಾಖಲಿಸಿರುವ ದೇಶದ್ರೋಹ ಪ್ರಕರಣವನ್ನು ಹಿಂಪಡೆಯಬೇಕು. ಜಿಲ್ಲೆಯಲ್ಲಿ ನಿರ್ಮಾಣವಾದ ಭಯದ ವಾತಾವರಣನ್ನು ತೆಗೆದು ಹಾಕಿ ಸಹೋದರತ್ವ ಭಾವವನ್ನು ಮುಂದುವರಿಸಿಕೊಂಡು ಹೋಗಬೇಕು ಹಾಗೂ ಈ ಪ್ರಕರಣದ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂದು ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಕಟನೆ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News