ಯೋಗೇಶ್ವರ್ ಗೆ ಮಂತ್ರಿ ಸ್ಥಾನ ಕೊಡಿಸಲು ಅಶ್ವಥ್ ನಾರಾಯಣ ತಮ್ಮ ಸ್ಥಾನ ತ್ಯಾಗ ಮಾಡಲಿ: ಶಾಸಕ ರೇಣುಕಾಚಾರ್ಯ

Update: 2020-02-05 12:28 GMT

ಬೆಂಗಳೂರು, ಫೆ. 5: ‘ಸೋತವರಿಗೆ ಮಂತ್ರಿ ಸ್ಥಾನ ನೀಡುತ್ತ ಹೋದರೆ ಪಕ್ಷಕ್ಕೆ ಮುಜುಗರವಾಗುತ್ತದೆ. ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಭಾಗದವರಿಗೆ ಅವಕಾಶ ನೀಡಿ ಪ್ರಾದೇಶಿಕ ಅಸಮತೋಲನ ಕಾಪಾಡಬೇಕಾಗಿದೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ನಾಯಕರು. ನಾಯಕತ್ವ, ಪಕ್ಷ ಮತ್ತು ಸರಕಾರದ ವಿರುದ್ದ ಯಾರು ಧ್ವನಿ ಎತ್ತಿಲ್ಲ ಮತ್ತು ಎತ್ತುವುದು ಇಲ್ಲ ಎಂದು ಪ್ರತ್ಯೇಕ ಸಭೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸ್ಥಾನ ತ್ಯಾಗ ಮಾಡಲಿ: ‘ಸಿ.ಪಿ.ಯೋಗೇಶ್ವರ್ ಅವರಿಗೆ ಮಂತ್ರಿಗಿರಿ ಕೊಡಿಸಲು ಡಿಸಿಎಂ ಅಶ್ವಥ್ ನಾರಾಯಣ ತಮ್ಮ ಸ್ಥಾನವನ್ನು ಬೇಕಾದರೆ ತ್ಯಾಗ ಮಾಡಲಿ, ನಾವು ಬಂಡಾಯ ಎದ್ದಿಲ್ಲ, ರೆಸಾರ್ಟ್‌ಗೆ ಹೋಗಿಲ್ಲ, ನಾವು ವ್ಯಕ್ತಪಡಿಸಿರುವ ಭಾವನೆಗಳನ್ನು ಬಿಎಸ್‌ವೈ ಅರ್ಥಮಾಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ನಮಗಿದೆ, ನಮ್ಮನ್ನ ರಾಜಕೀಯವಾಗಿ ಬೆಳೆಸಿ ಶಾಸಕರನ್ನಾಗಿ ಮಾಡಿರುವ ಬಿಎಸ್‌ವೈ ನಮ್ಮ ಪ್ರಶ್ನಾತೀತ ನಾಯಕರು’ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಸಮರ್ಥನೆ: ‘ರಾಜಕೀಯದಲ್ಲಿ ಒಳ್ಳೆಯ ಹೃದಯದಿಂದ ನೇರ ನಡೆ ನುಡಿಗಳಿರುವ ವ್ಯಕ್ತಿತ್ವದ ನಾಯಕರು ಯಾವಾಗಲು ಮಾತನಾಡುವುದರಲ್ಲಿ ಒರಟಾಗಿರುತ್ತಾರೆ. ಮಾತು ಒರಟಾಗಿದ್ದರು ಹೃದಯ ಶ್ರೀಮಂತರಾಗಿರುತ್ತಾರೆ’ ಎಂದು ರೇಣುಕಾಚಾರ್ಯ, ಸಂಸದ ಅನಂತಕುಮಾರ್ ಹೆಗೆಡೆ ಜೊತೆಗಿನ ತಮ್ಮ ಫೋಟೋದೊಂದಿಗೆ ಟ್ವೀಟ್ ಮಾಡಿದ್ದು, ಪರೋಕ್ಷವಾಗಿ ಹೆಗಡೆಯ ಗಾಂಧಿ ಕುರಿತ ಹೇಳಿಕೆಯನ್ನು ಸಮರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News