ಸಂಪುಟ ಸೇರಲು ಗೆದ್ದವರು, ಮೂಲ ಬಿಜೆಪಿಗರ ಜೊತೆ 'ಅನರ್ಹ'ರ ಕಸರತ್ತು: ಎಲ್ಲಾ ಗೊಂದಲಗಳಿಗೂ ನಾಳೆ ತೆರೆ

Update: 2020-02-05 14:27 GMT

ಬೆಂಗಳೂರು, ಫೆ. 5: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ನಾಳೆ (ಫೆ.6) ಬೆಳಗ್ಗೆ 10:30ಕ್ಕೆ ರಾಜಭವನದಲ್ಲಿ ಸಂಪುಟ ಸೇರಲಿರುವ ನೂತನ ಸದಸ್ಯರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಲಿದ್ದಾರೆ.

‘ಸೋತವರಿಗೆ’ ಸಚಿವ ಸ್ಥಾನ, ಮೂಲ ಬಿಜೆಪಿಗರ ಅಸಮಾಧಾನ ಮತ್ತು ‘ಅರ್ಹರಿಗೆ’ ಸ್ಥಾನಮಾನ ನೀಡಬೇಕೆಂಬ ಒತ್ತಡದ ನಡುವೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಆದರೆ, ಎಷ್ಟು ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ.

‘ನಾಳೆ ಸಚಿವ ಸಂಪುಟ ವಿಸ್ತರಣೆ ನಡೆಯುವುದು ಖಚಿತ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಎಷ್ಟು ಜನ ಸೇರ್ಪಡೆಯಾಗುತ್ತಾರೆಂಬ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದು, ರಾತ್ರಿ ವೇಳೆಗೆ ಹೈಕಮಾಂಡ್ ಮಾಹಿತಿ ನೀಡಲಿದೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಉಪಚುನಾವಣೆಯಲ್ಲಿ ಆಯ್ಕೆಯಾದ 11 ಮಂದಿ ಪೈಕಿ ಹತ್ತು ಮಂದಿಗೆ ಹಾಗೂ ಹಿರಿಯ ಶಾಸಕ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಮತ್ತು ಸಿ.ಪಿ.ಯೋಗೇಶ್ವರ್ ಸೇರಿದಂತೆ 13 ಮಂದಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಆದರೆ, ಸಿ.ಪಿ.ಯೋಗೇಶ್ವರ್ ಸೇರ್ಪಡೆಗೆ ಮಾಜಿ ಸಚಿವ ಎಚ್.ವಿಶ್ವನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ‘ನನ್ನಿಂದ ಹಣ ಪಡೆದು ದ್ರೋಹ ಮಾಡಿ, ನನ್ನ ಸೋಲಿಗೆ ಕಾರಣರಾದ ಯೋಗೇಶ್ವರ್ ಅವರನ್ನು ಯಾವುದೇ ಕಾರಣಕ್ಕೂ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು’ ಎಂದು ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿದ್ದಾರೆಂದು ಗೊತ್ತಾಗಿದೆ.

ಈ ಮಧ್ಯೆ ಸೋತ ಎಂ.ಟಿ.ಬಿ.ನಾಗರಾಜ್ ಮತ್ತು ಎಚ್.ವಿಶ್ವನಾಥ್ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಉಪಚುನಾವಣೆಯಲ್ಲಿ ಗೆದ್ದ 11 ಮಂದಿ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ನೀಡಬೇಕೆಂಬ ‘ಅರ್ಹ ಶಾಸಕರ’ ಒತ್ತಡದಿಂದ ಕಂಗೆಟ್ಟಿರುವ ಬಿಎಸ್‌ವೈ ಯಾರಿಗೆ ಸ್ಥಾನ ನೀಡಲಿದ್ದಾರೆಂಬುದು ನಿಗೂಢವಾಗಿದೆ. ಎಲ್ಲ ಗೊಂದಲಕ್ಕೆ ನಾಳೆ(ಫೆ.6) ಬೆಳಗ್ಗೆ ರಾಜಭವನದಲ್ಲಿ ನಡೆಯಲಿರುವ ಸಂಪುಟ ವಿಸ್ತರಣೆ ಪ್ರಮಾಣ ವಚನ ಕಾರ್ಯಕ್ರಮ ಉತ್ತರಿಸಲಿದೆ.

ಸಂಭಾವ್ಯರ ಪಟ್ಟಿ: ರಮೇಶ್ ಜಾರಕಿಹೊಳಿ(ಗೋಕಾಕ್), ಎಸ್.ಟಿ. ಸೋಮಶೇಖರ್(ಯಶವಂತಪುರ), ಕೆ.ಗೋಪಾಲಯ್ಯ(ಮಹಾಲಕ್ಷ್ಮೀ ಲೇಔಟ್), ಬೈರತಿ ಬಸವರಾಜು(ಕೆ.ಆರ್.ಪುರಂ), ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ), ಬಿ.ಸಿ.ಪಾಟೀಲ್(ಹಿರೇಕೆರೂರು), ನಾರಾಯಣಗೌಡ(ಕೆ.ಆರ್.ಪೇಟೆ), ಶ್ರೀಮಂತ ಪಾಟೀಲ್(ಕಾಗವಾಡ), ಶಿವರಾಮ ಹೆಬ್ಬಾರ್(ಯಲ್ಲಾಪುರ), ಆನಂದಸಿಂಗ್(ವಿಜಯನಗರ) ಹಾಗೂ ಉಮೇಶ್ ಕತ್ತಿ(ಹುಕ್ಕೇರಿ), ಅರವಿಂದ ಲಿಂಬಾವಳಿ(ಮಹದೇವಪುರ).

ಕೂಸು ಹುಟ್ಟುವ ಮೊದಲೇ..:‘ಸಚಿವ ಸಂಪುಟ ವಿಸ್ತರಣೆಗೆ ಹಗ್ಗಜಗ್ಗಾಟ ನಡೆಯುತ್ತಿರುವ ಬೆನ್ನಲ್ಲೆ ನೂತನ ಸಚಿವರಾಗುತ್ತಿರುವ ಸಿ.ಪಿ.ಯೋಗೇಶ್ವರ್‌ಗೆ ಅಭಿನಂದನೆಗಳು..! ಎಂಬ ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ಬೆಂಗಳೂರು-ಮೈಸೂರು ಹೆದ್ದಾರಿಯ ಚನ್ನಪಟ್ಟಣ ನಗರದ ಬೀದಿಗಳಲ್ಲಿ ರಾರಾಜಿಸುತ್ತಿವೆ’

ಬುಧವಾರ(ಫೆ.5) ಸಾಯಂಕಾಲ 4:34, ಈ ದಿನ ಈ ಸಮಯ ಮಧುರ ಕ್ಷಣ, ನಾಳೆ ಬೆಳಗ್ಗೆ 10.30ಕ್ಕೆ ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಖುದ್ದು ಕರೆ. ಆತ್ಮೀಯರೇ, ನಾಳೆ ಬೆಳಗ್ಗೆ 10.30ಕ್ಕೆ ಕರ್ನಾಟಕ ಸರಕಾರದ ಸಂಪುಟ ದರ್ಜೆಯ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ’

-ಬಿ.ಸಿ.ಪಾಟೀಲ್ ಹೀರೇಕೆರೂರು ಕ್ಷೇತ್ರದ ಶಾಸಕ(ಟ್ವೀಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News