ನನಗೆ ಸಚಿವ ಸ್ಥಾನ ನೀಡಲಾಗದಿದ್ದರೆ....: ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದೇನು ?

Update: 2020-02-05 14:03 GMT

ಬೆಂಗಳೂರು, ಫೆ. 5: ಸಿಎಂ ಯಡಿಯೂರಪ್ಪ ತಮಗೆ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿರುವ ಶಾಸಕ ಮಹೇಶ್ ಕುಮಟಳ್ಳಿ, ಒಂದು ವೇಳೆ ನನಗೆ ಸಚಿವ ಸ್ಥಾನ ನೀಡಲಾಗದಿದ್ದರೆ ಎಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ಅವರು ಕೊಟ್ಟ ಮಾತನ್ನು ಎಂದೂ ತಪ್ಪಿಲ್ಲ. ಉಪಚುನಾವಣೆಯಲ್ಲಿ ಆಯ್ಕೆಯಾದ 11 ಮಂದಿ ಶಾಸಕರ ಪೈಕಿ ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂದರೆ ಬೇಸರವಾಗುತ್ತದೆ. ಒಂದೂವರೆ ವರ್ಷದಿಂದ ರಮೇಶ್ ಜಾರಕಿಹೊಳಿ ಅವರನ್ನು ಬಿಟ್ಟರೆ ನನ್ನ ಹೆಸರೇ ಕೇಳಿ ಬರುತ್ತಿತ್ತು. ಆದರೂ, ನನಗೆ ಸಚಿವ ಸ್ಥಾನ ನೀಡುತ್ತಿಲ್ಲ ಎಂಬ ಮಾತಿದೆ. ನನಗೆ ಸಚಿವ ಸ್ಥಾನ ನೀಡಲೇಬೇಕು. ಒಂದು ವೇಳೆ ಆಗದಿದ್ದರೆ ಬಿಜೆಪಿ ಸರಕಾರ ರಚನೆ ವೇಳೆ ನಮ್ಮೊಂದಿಗೆ ಇದ್ದ ಅವರಿಗೆ ಸಚಿವ ಸ್ಥಾನ ನೀಡುವಂತೆ ಕೋರಲಾಗಿದೆ ಎಂದರು.

ಸಿಎಂ ಯಡಿಯೂರಪ್ಪ ಹಾಗೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದು, ಒಂದು ವೇಳೆ ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕೈ ತಪ್ಪಿದರೆ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನನಗೆ ಸಚಿವ ಸ್ಥಾನ ಕೊಡದಿದ್ದರೂ ಪರವಾಗಿಲ್ಲ ಎಂದ ಅವರು, ರಮೇಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.

ರಮೇಶ್ ಅಣ್ಣ ಅವರಿಗೆ ಜಲಸಂಪನ್ಮೂಲ ಖಾತೆಯನ್ನು ನೀಡಿದರೆ ಉತ್ತರ ಕರ್ನಾಟಕದ ಅಭಿವೃದ್ಧಿಯಾಗುತ್ತದೆ ಎಂಬುದು ನಮ್ಮ ಅಪೇಕ್ಷೆ. ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಮುಖ್ಯಮಂತ್ರಿ ಭೇಟಿ ಮಾಡಿದ್ದೇನೆ. ಅದನ್ನು ಬಿಟ್ಟು ಸಚಿವ ಸ್ಥಾನಕ್ಕಾಗಿ ನಾನೂ ಅವರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News