ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿಗೆ ಆದ್ಯತೆ: ಸಿಎಂ ಯಡಿಯೂರಪ್ಪ

Update: 2020-02-05 18:31 GMT

ಕಲಬುರಗಿ, ಫೆ.5: ಖಾಸಗಿ ವಲಯದಲ್ಲಿನ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂದು ಈಗಾಗಲೇ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾನಿಲಯದ ಆವರಣದಲ್ಲಿ 3 ದಿನಗಳ ಕಾಲ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕನ್ನಡಿಗರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು, ನಾಡು, ನುಡಿ ರಕ್ಷಣೆ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯದಲ್ಲಿರುವ ಖಾಲಿ ಹುದ್ದೆಗಳನ್ನು ಗುರುತಿಸಿ, ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ವೃತ್ತಿಪರ ಕೋರ್ಸ್‌ಗಳ ಅಧ್ಯಯನಕ್ಕೂ ಒತ್ತು ನೀಡಲಾಗುತ್ತಿದೆ. ರಾಜ್ಯದಲ್ಲಿ ಅಪೌಷ್ಟಿಕತೆ ನಿವಾರಣೆಗೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಮ್ಮ ರಾಜ್ಯದ ಕಾವೇರಿ ಹಾಗೂ ಕೃಷ್ಣ ನದಿಯ ಜಲ ಸಂಪನ್ಮೂಲವನ್ನು ಸಮಗ್ರವಾಗಿ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಜಂಟಿಯಾಗಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಸರಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ ಪ್ರಭುತ್ವದ ಜತೆಗೆ ಸಮುದಾಯದ ಪಾತ್ರವೂ ಅತಿಮುಖ್ಯ ಎಂದು ಮುಖ್ಯಮಂತ್ರಿ ಅಭಿಪ್ರಾಯಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸಂಚಾರಿ ತಾರಾಲಯವನ್ನು ಆರಂಭಿಸಲಾಗಿದೆ. ಕನ್ನಡದ ರಾಷ್ಟ್ರೀಯ ಅಧ್ಯಯನ ಪೀಠ ಸ್ಥಾಪನೆಗೆ ಸರಕಾರ ಮುಂದಾಗಿದೆ. ಅದಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮೂರು ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಗೋವಿಂದ ಎಂ. ಕಾರಜೋಳ ಮಾತನಾಡಿ, ನಾಡಿನ ಭಾಷೆಯಾದ ಕನ್ನಡ ಇಂದು ನಶಿಸುತ್ತಿದೆ. ಹೀಗಾಗಿ, ಯಾರಾದರೂ ಅನ್ಯ ಅಥವಾ ಪರಕೀಯ ಭಾಷೆಯಲ್ಲಿ ಮಾತನಾಡಿಸಿದರೆ, ನಾವು ಕನ್ನಡದಲ್ಲಿ ಮಾತನಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಸಂಸದ ಉಮೇಶ್ ಜಾಧವ್, ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್, ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಜಿಲ್ಲಾಧಿಕಾರಿ ಬಿ. ಶರತ್ ಹಾಗೂ ಜಿಲ್ಲಾ ವ್ಯಾಪ್ತಿಯ ಎಲ್ಲ ಶಾಸಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News