ನಿಮ್ಮ ಮೌನ ನೋಡಿ ಆಘಾತಗೊಂಡಿದ್ದೇನೆ: ಬಿಎಸ್‌ವೈಗೆ ಪತ್ರ ಬರೆದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ

Update: 2020-02-05 17:10 GMT

ಬೀದರ್‌, ಫೆ.5: ಬೀದರ್‌ ನ ಶಾಹೀನ್ ಶಾಲೆಯಲ್ಲಿ ಸಿಎಎ ವಿರುದ್ಧ ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿದ ಬಳಿಕ ದೇಶದ್ರೋಹದ ಪ್ರಕರಣ ದಾಖಲಾದ ಬಗ್ಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ರಾಜ್ಯಪಾಲೆ ಹಾಗೂ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್‌ ಆಳ್ವಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. 

'ಬೀದರ್‌ನ ಶಾಲೆಯಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ನಿಮ್ಮ ಮೌನ ನೋಡಿ ನಾನು ಆಘಾತಗೊಂಡಿದ್ದೇನೆ. ಇದು ಪ್ರಜಾಪ್ರಭುತ್ವ ದೇಶವಾ ಅಥವಾ ಪೊಲೀಸ್ ರಾಜ್ಯವಾ? ಶಾಲಾ ಸಿಬ್ಬಂದಿ, ಪೋಷಕರು ಮತ್ತು ಮಕ್ಕಳ ಕಿರುಕುಳ ಯಾರ ಸೂಚನೆಯ ಮೇರೆಗೆ ನಡೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ. 

ಈ ಬೆಳವಣಿಗೆಗಳ ಬಗ್ಗೆ ನಿಮಗೆ ತಿಳಿದಿದೆಯೇ ಅಥವಾ ಉದ್ದೇಶ ಪೂರ್ವಕವಾಗಿ ಅಸಡ್ಡೆ ಹೊಂದಿದ್ದೀರಾ? ಕೇಂದ್ರ ಸರ್ಕಾರವು ಅಂಗೀಕರಿಸಿದ ದೇಶಕ್ಕೆ ಮಾರಕವಾದ ಸಿಎಎ ಕಾನೂನನ್ನು ವಿರೋಧಿಸುವವರನ್ನು ದೇಶದ್ರೋಹಿಗಳೆಂದು ಕರೆಯುವ ರೀತಿಯಲ್ಲಿ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ. ಈ ನಾಟಕ ನಿಮಗೆ ಕಾಣುತ್ತಿಲ್ಲವೇ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಕ್ಯಾಬಿನೆಟ್ ವಿಸ್ತರಣೆ ವಿಚಾರದಲ್ಲಿ ಮುಳುಗಿರುವ ನಿಮಗೆ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ನಿಮ್ಮ ಜವಾಬ್ದಾರಿ ಎಂಬುದನ್ನೇ ಮರೆತಿದ್ದೀರಿ. ಕರ್ನಾಟಕ ರಾಜ್ಯವು ಈ ಮಟ್ಟದ ಭಯ ಮತ್ತು ಕಿರುಕುಳಕ್ಕೆ ಇಳಿಯುವುದನ್ನು ನೋಡಲು ನಾನು ಬದುಕುತ್ತೇನಾ? ಎಂದು ಊಹಿಸಿಕೊಂಡಿರಲಿಲ್ಲ. ಸಂಬಂಧಪಟ್ಟ ಪ್ರಜೆಯಾಗಿ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಈ ಮುಗ್ಧ ಮಕ್ಕಳು ಮತ್ತು ಅವರ ಕುಟುಂಬಗಳ ಹಕ್ಕುಗಳನ್ನು ರಕ್ಷಿಸುವುದು ಮತ್ತು ಈ ಕಾನೂನು ಬಾಹಿರ ಕ್ರಮಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದು ನಿಮ್ಮ ಕರ್ತವ್ಯ. ಇದನ್ನು ನಿರ್ವಹಿಸುವಂತೆ ವಿನಂತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News