ಸರಕಾರಿ ಜಾಗದಲ್ಲಿ ನಿರ್ಮಿಸಿದ ಗುಡಿಸಲು ತೆರವು: ತಾಲೂಕಾಡಳಿತದ ಕ್ರಮದಿಂದ 60 ಕುಟುಂಬಗಳು ಅತಂತ್ರ

Update: 2020-02-05 18:22 GMT

ಸಿದ್ದಾಪುರ (ಕೊಡಗು), ಫೆ.5: ಕೊಡಗಿನ ವೀರಾಜಪೇಟೆ ತಾಲೂಕಿನ ಬಾಳುಗೋಡುವಿನ ಸರಕಾರಿ ಜಾಗದಲ್ಲಿ 45 ದಿನಗಳಿಂದ ವಸತಿ ರಹಿತರು ಗುಡಿಸಲುಗಳನ್ನು ಕಟ್ಟಿಕೊಂಡು ಶಾಶ್ವತ ನಿವೇಶನಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದು, ಸ್ಥಳಕ್ಕಾಮಿಸಿದ ತಾಲೂಕು ಆಡಳಿತ ಗುಡಿಸಲುಗಳನ್ನು ತೆರವುಗೊಳಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ನೂರಾರು ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ, ವೀರಾಜಪೇಟೆ ತಾಲೂಕು ತಹಶಿಲ್ದಾರ್ ಮಹೇಶ್ ಸೇರಿ ದಂತೆ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿತು.

ತೆರವು ಕಾರ್ಯಾಚರಣೆಯನ್ನು ಪ್ರಶ್ನಿಸಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಯುವ ಕಾರ್ಯಕರ್ತ ಹೇಮಂತ್ ಎಂಬುವವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು, ಗುಡಿಸಲುಗಳನ್ನು ತೆರವುಗೊಳಿಸಲು ಅಡ್ಡಿಪಡಿಸಿದವರ ಮೇಲೆ ಕೇಸು ಹಾಕುವುದಾಗಿ ಎಸಿ, ತಹಸೀಲ್ದಾರ್ ಪೊಲೀಸರ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಪಾಲೇಮಾಡು ಹೋರಾಟಗಾರ ಮೊಣ್ಣಪ್ಪ ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಹೇಮಂತ್ ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಜಾಗದಲ್ಲಿ ಕಸ ವಿಲೇವಾರಿ ಘಟಕ ಮಾಡಬೇಕೆಂದು ಜಿಲ್ಲಾಡಳಿತದ ಯೋಜನೆಯಾಗಿದೆ. ಅದಕ್ಕಾಗಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ಈ ಜಾಗದಲ್ಲಿ ಗುಡಿಸಲು ನಿರ್ಮಿಸಿ ವಾಸವಿದ್ದ ದಲಿತ, ಆದಿವಾಸಿ, ಹಿಂದುಳಿದ ವರ್ಗಗಳ ಸಮುದಾಯಗಳ ಅಂದಾಜು 60 ಕುಟುಂಬಗಳ ಸುಮಾರು 200ಕ್ಕೂ ಹೆಚ್ಚು ಜನರು ನೆಲೆ ಕಳೆದುಕೊಂಡು ಅತಂತ್ರರಾಗಿದ್ದಾರೆ. ಸಾಲ ಮಾಡಿಕೊಂಡು ಹಾಗೂ ಕೂಲಿ ಮಾಡಿ ಕೂಡಿಟ್ಟ ಹಣದಿಂದ ಗುಡಿಸಲು ಕಟ್ಟಿ ಶೆಡ್ ಹಾಕಲಾಗಿತ್ತು. ಈಗ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂಬುದು ನಿರಾಶ್ರಿತ ಮಹಿಳೆಯರ ಅಳಲು ತೋಡಿಕೊಂಡಿದ್ದಾರೆ.

ಬಡಜನರ ಮೇಲಿನ ದೌರ್ಜನ್ಯವನ್ನು ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಹಲ್ಲೆ, ದೌರ್ಜನ್ಯ ನಡೆಸಿದವರ ಮೇಲೆ ತೀವ್ರ ಕ್ರಮ ಕೈಗೊಳ್ಳಬೇಕು ಮತ್ತು ವಸತಿ ರಹಿತರಿಗೆ ಅದೇ ಸರಕಾರಿ ಜಾಗದಲ್ಲಿ ಜಾಗ ಮಂಜೂರು ಮಾಡಿ ಮನೆ ನಿರ್ಮಿಸಿ ಕೊಡಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕೇಂದ್ರ ಸಮಿತಿಯ ಸದಸ್ಯ ಅಮೀನ್ ಮೊಹ್ಸಿನ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಉಪವಿಭಾಗಾಧಿಕಾರಿ ಜವರೇಗೌಡ ವಾರ್ತಾಭಾರತಿಯೊಂದಿಗೆ ಮಾತನಾಡಿ, ಸರಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು. ಏಕಾಏಕಿ ಬಂದು ಗುಡಿಸಲು ಕಟ್ಟಿಕೊಳ್ಳಲು ಅವಕಾಶ ಇಲ್ಲ ಎಂದು ಅವರಿಗೆ ತಿಳಿಸಲಾಗಿದೆ. ನಿವೇಶನ ರಹಿತರ ಹೆಸರನ್ನು ನೀಡಿದರೆ ಪಟ್ಟಿ ಮಾಡಿಕೊಂಡು ಜಿಲ್ಲಾಡಳಿತದ ಗಮನಕ್ಕೆ ತಂದು ನಿಯಮಾನುಸಾರ ವಸತಿರಹಿತರಿಗೆ ನಿವೇಶನ ನೀಡುವ ಬಗ್ಗೆ ಗುಡಿಸಲು ಕಟ್ಟಿಕೊಂಡವರಿಗೆ ಮನವರಿಕೆ ಮಾಡಿಕೊಡಲಾಯಿತು. ಬಳಿಕ ಅವರು ಸ್ವಯಂ ಪ್ರೇರಣೆಯಿಂದ ಗುಡಿಸಲುಗಳನ್ನು ತೆರವುಗೊಳಿಸಿಕೊಂಡು ಹೋಗಿದ್ದಾರೆ. ಯಾರ ಮೇಲೆಯೂ ಹಲ್ಲೆಯಾಗಿಲ್ಲ. ಯಾರನ್ನೂ ಬಲವಂತ ಮಾಡಿಲ್ಲ. ಈ ಜಾಗದಲ್ಲಿ ಒಂದು ಎಕರೆ ಮಾತ್ರ ಕಸ ವಿಲೇವಾರಿಗೆ ಗುರುತಿಸಿರುವುದು. ಸರಕಾರಿ ಜಾಗವನ್ನು ಅಳತೆ ಮಾಡಿ ನಿವೇಶನ ನೀಡುವ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Writer - ಮುಸ್ತಫಾ ಸಿದ್ದಾಪುರ

contributor

Editor - ಮುಸ್ತಫಾ ಸಿದ್ದಾಪುರ

contributor

Similar News