ಸಮ್ಮೇಳನ ಮುಗಿದ ತಕ್ಷಣ ಮನುಬಳಿಗಾರ್ ರಾಜೀನಾಮೆ ನೀಡಬೇಕು: ಆರ್‌.ಕೆ.ಹುಡಗಿ ಒತ್ತಾಯ

Update: 2020-02-06 14:48 GMT

ಕಲಬುರಗಿ, ಫೆ.6: ನಾವೆಲ್ಲರೂ ಸೇರಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರನ್ನು ಚುನಾಯಿಸಿರುವುದು ನಾಡು, ನುಡಿ ರಕ್ಷಣೆಗಾಗಿ. ಆದರೆ, ಆಳುವ ವರ್ಗದ ಅಡಿಯಾಳಾಗಿರುವ ಕಸಾಪ ಅಧ್ಯಕ್ಷ ಡಾ. ಮನುಬಳಿಗಾರ್ ಸಮ್ಮೇಳನ ಮುಗಿದ ಕೂಡಲೇ ರಾಜೀನಾಮೆ ನೀಡಬೇಕು ಎಂದು ಹಿರಿಯ ಸಾಹಿತಿ ಪ್ರೊ. ಆರ್.ಕೆ.ಹುಡಗಿ ಒತ್ತಾಯಿಸಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯ ಕಸಾಪ ಅಧ್ಯಕ್ಷ ಮನುಬಳಿಗಾರ್ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಲೇ ಇದೆ.

ಇಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್ ಸಮಾನಾಂತರ ವೇದಿಕೆಯಲ್ಲಿ ನಡೆದ ಕಲಬುರಗಿ ಜಿಲ್ಲಾ ದರ್ಶನ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್‌.ಕೆ.ಹುಡಗಿ, ಶೃಂಗೇರಿಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿ ಆಳುವ ವರ್ಗದ ಮಧ್ಯ ಪ್ರವೇಶ ಮಾಡಿದ್ದನ್ನು ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಬಳಿಗಾರ್ ಖಂಡಿಸದೇ ಇರುವುದು ಸರಿಯಲ್ಲ. ಸಮ್ಮೇಳನ ಮಾಡಿದರೆ ಪೆಟ್ರೋಲ್ ಬಾಂಬ್ ಹಾಕ್ತೀವಿ ಎಂದು ಬೆದರಿಸಿದರು. ಅದರ ವಿರುದ್ಧ ಪರಿಷತ್ತು ಅಧ್ಯಕ್ಷರಾಗಿ ಇದರ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲ. ಕಸಾಪ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಇದರಲ್ಲಿ ಸ್ವತಂತ್ರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವಿದೆ. ಆದರೆ, ಅಂದಿನ ಅಧ್ಯಕ್ಷ ವಿಟ್ಠಲ ಕಲ್ಗುಡಿ ಅವರನ್ನು ಆಯ್ಕೆಯ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೇ ವಿರೋಧಿಸಿದ್ದು ಸರಿಯಲ್ಲ. ಅನುದಾನ ನಿಮ್ಮ ಮನೆಯದ್ದು ಅಲ್ಲ, ಸಾಹಿತ್ಯ ಸಮ್ಮೇಳನಕ್ಕೆ ಸರಕಾರದಿಂದ ನೀಡುವ ಅನುದಾನ ನೀಡಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೆ, ಅನುದಾನ ನಿಮ್ಮ ಮನೆಯದ್ದು ಅಲ್ಲ ಸಚಿವರೇ, ನಮ್ಮ‌ ತೆರಿಗೆ ಹಣ ಎಂದು ಅವರು ಹೇಳಿದರು.

ಇಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಸಹ ಸಚಿವ ಸಿ.ಟಿ.ರವಿಯೇ ಮಧ್ಯಸ್ಥಿಕೆ ವಹಿಸಿ ಆಯ್ಕೆ ಮಾಡಿದ್ದಾರೆ ಎನ್ನಿಸುತ್ತದೆ‌. ಎಚ್.ಎಸ್‌. ವೆಂಜಟೇಶಮೂರ್ತಿಯವರ ಬಗ್ಗೆ ನನಗೆ ಅಪಾರವಾದ ಗೌರವವಿದೆ‌. ಆದರೆ, ಅವರ ಮೌನ ಅರ್ಥವಾಗ್ತಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News