ಪ್ರಭುತ್ವವನ್ನು ಪ್ರಶ್ನಿಸುವುದೇ ಅಪರಾಧವಾಗುತ್ತಿದೆ: ಡಾ.ಅಪ್ಪಗೆರೆ ಸೋಮಶೇಖರ

Update: 2020-02-06 17:23 GMT

ಕಲಬುರಗಿ, ಫೆ.6: ವ್ಯವಸ್ಥೆಯನ್ನು ಪ್ರಶ್ನಿಸಿದರೆ ದೇಶದ್ರೋಹ ಪಟ್ಟ, ಕವನ ವಾಚಿಸಿದರೆ ಎಫ್ಐಆರ್ ದಾಖಲಿಸುತ್ತಿರುವಂತಹ ಸಂಧಿಗ್ನ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಹೇಳಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಸಮಾನಾಂತರ ವೇದಿಕೆಯಲ್ಲಿ 'ಕನ್ನಡ ನಾಡು-ನುಡಿ ಮತ್ತು ಯುವ ಕರ್ನಾಟಕ' ವಿಷಯ ಕುರಿತು ನಡೆದ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜದಲ್ಲಾಗುವ ಅನ್ಯಾಯಗಳನ್ನು ಪ್ರಶ್ನಿಸುವುದನ್ನು ಬಿಟ್ಟು ಗುಲಾಮರ ರೀತಿಯಲ್ಲಿ ಕೈ ಕಟ್ಟಿ ಕೂರಬೇಕಾದ ಪರಿಸ್ಥಿತಿಯನ್ನು ತಂದಿಡಲಾಗಿದೆ. ನಾವಿಂದು ಅಘೋಷಿತ ತುರ್ತು ಪರಿಸ್ಥಿತಿಯಲ್ಲಿದ್ದೇವೆ ಎಂಬ ಭಾವನೆ ಮೂಡುತ್ತಿದೆ ಎಂದ ಅವರು, ಇದೀಗ ನಮ್ಮಲ್ಲಿ ಜನಪರ ವಾತಾವರಣ ಕಂಡು ಬರುತ್ತಿಲ್ಲ ಎಂದು ತಿಳಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿರುವ ಪ್ರಭುತ್ವವು ಯುವಜನರನ್ನು ದಾರಿ ತಪ್ಪಿಸುತ್ತಿದೆ. ಕೋಮುವಾದ, ಜಾತಿವಾದದ ಮದ ಏರಿಸಿ ಅವರ ಬದುಕು, ಭವಿಷ್ಯವನ್ನು ಹಾಳು ಮಾಡುತ್ತಿದೆ. ಉತ್ತಮ ಶಿಕ್ಷಣ, ಉದ್ಯೋಗಾವಕಾಶ, ಬದುಕಲು ನೆಮ್ಮದಿಯ ವಾತಾವರಣ ಕಲ್ಪಿಸುವ ಬದಲು ಅವರ ಮನದಲ್ಲಿ ಜಾತಿ, ಮತದ ವಿಷಬೀಜ ಬಿತ್ತಲಾಗುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದರು.

ಕಾನೂನುಗಳನ್ನು ಉಲ್ಲಂಘನೆ ಮಾಡುವವರಿಗೆ ನ್ಯಾಯಾಲಯಗಳು ಶಿಕ್ಷೆ ನೀಡುತ್ತದೆ. ಅದೇ ರೀತಿಯಲ್ಲಿ ಕಳೆದ ಏಳು ದಶಕಗಳಿಂದಲೂ ನಿರಂತರವಾಗಿ ಆಳಿದವರು ಸಂವಿಧಾನವನ್ನು ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ಯಾವ ರೀತಿಯ ಶಿಕ್ಷೆ ನೀಡಲಾಗುತ್ತದೆ ಎಂದು ಪ್ರಶ್ನಿಸಿದ ಅವರು, ಸಂವಿಧಾನದ ಅಸ್ತಿತ್ವವನ್ನೇ ವ್ಯವಸ್ಥಿತವಾಗಿ ನಾಶಪಡಿಸಲು ಯತ್ನ ನಡೆದಿರುವ ಇಂದಿನ ದಿನಮಾನಗಳಲ್ಲಿ ಪ್ರಭುತ್ವವನ್ನು ಪ್ರಶ್ನಿಸುವುದೇ ಅಪರಾಧವಾಗಿದೆ. ಪ್ರಶ್ನಿಸುವವರೇ ಅಪರಾಧಿ ಆಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರಕವಿ ಕುವೆಂಪು ಜಾತಿ, ಧರ್ಮಗಳನ್ನು ಮೀರಿ ವಿಶ್ವಮಾನವರಾಗಿ ರೂಪಗೊಳ್ಳುವಂತೆ ಕರೆ ನೀಡಿದ್ದಾರೆ. ಆದರೆ, ಇಂದಿನ ದಿನಗಳಲ್ಲಿ ಅವರನ್ನೇ ಜಾತಿಗೆ ಸೀಮಿತ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ದೇಶದ ನಾಗಕರಿನಾಗಿ ಹಕ್ಕು, ಕರ್ತವ್ಯಗಳನ್ನು ಚಲಾಯಿಸದಂತೆ ದಮನ ಮಾಡಲಾಗುತ್ತಿದೆ' ಎಂದು ಅವರು ಅಭಿಪ್ರಾಯಿಸಿದರು.

ದೇಶದಲ್ಲಿ ಭಯಗ್ರಸ್ಥ ಸರ್ವಾಧಿಕಾರ ವ್ಯವಸ್ಥೆಯಿದೆ. ಆಳುವ ವರ್ಗ ಶೈಕ್ಷಣಿ ಸಂಸ್ಥೆಗಳ ಮೇಲೆ ದಾಳಿ ಮಾಡುವ ಮೂಲಕ ವಿದ್ಯಾರ್ಥಿ-ಯುವಜನರಲ್ಲಿ ವೈಜ್ಞಾನಿಕ ಪ್ರಜ್ಞೆಯೇ ಬಾರದಂತೆ ಮಾಡಲಾಗುತ್ತಿದೆ. ಇತ್ತೀಚಿಗೆ ದಿಲ್ಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯದ ಮೇಲೆ ನಡೆಸಿದ ವ್ಯವಸ್ಥಿತ ದಾಳಿಯೇ ಇದಕ್ಕೆ ಉದಾಹರಣೆ. ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಸಿಸಿ ಟಿವಿ ಇಡುವ ಮೂಲಕ ಶಿಕ್ಷಕರು-ಉಪನ್ಯಾಸಕರು ಇಂತಹದೇ ಪಾಠ ಮಾಡಬೇಕು ಎಂದು ತೀರ್ಮಾನಿಸಲೂ ಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿ ಸಾಹಿತಿ ಎಚ್.ಜಿ.ಶೋಭಾ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕಾರ್ಖಾನೆಗಳ ರೀತಿಯಲ್ಲಿ ತಯಾರಾಗುತ್ತಿದ್ದು, ವಿದ್ಯಾರ್ಥಿಗಳೇ ಅವರ ಸರಕಾಗಿದ್ದಾರೆ. ಬೌದ್ಧಿಕವಾಗಿ ಅವರ ಜ್ಞಾನ ವೃದ್ಧಿಸಿ ಉತ್ತಮ ವ್ಯಕ್ತಿಗಳನ್ನಾಗಿಸುವ ಬದಲು ಯಂತ್ರಗಳನ್ನು ಸೃಷ್ಟಿಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News