ಸಿಎಎ, ಎನ್‌ಆರ್‌ಸಿ ಜಾರಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು: ಮಲ್ಲಿಕಾರ್ಜುನ ಖರ್ಗೆ

Update: 2020-02-06 17:26 GMT

ಕಲಬುರಗಿ, ಫೆ.6: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಪೌರತ್ವ ನೋಂದಣಿ ಕಾಯ್ದೆ(ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ಜಾರಿಗೊಳಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎರಡನೇ ದಿನದಂದು ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕಾಯ್ದೆಯನ್ನು ಉದ್ದೇಶಪೂರ್ವವಾಗಿ ಜಾರಿಗೆ ಮುಂದಾಗಿರುವುದು ಸಲ್ಲ ಎಂದರು. ಈ ಕಾಯ್ದೆಗಳನ್ನು ಜಾರಿಗೊಳಿಸಿದರೆ ಭವಿಷ್ಯದಲ್ಲಿ ನಾವು ಮಾತನಾಡುವ ಮತ್ತು ಪ್ರಶ್ನಿಸುವ ಸ್ವಾತಂತ್ರ್ಯ ಕಳೆದುಕೊಳ್ಳುತ್ತೇವೆ. ಇಂಥ ಅಪಾಯಕಾರಿ ದಿನಗಳು ಬಾರದಂತೆ ನಾವು ಎಚ್ಚರ ವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಖರ್ಗೆ ನುಡಿದರು.

ಭಾರತದಲ್ಲಿಂದು ಪ್ರಜಾಪ್ರಭುತ್ವ ಅತ್ಯಂತ ಅಪಾಯದ ಸ್ಥಿತಿಯಲ್ಲಿದೆ. ಇಂದಿನಿಂದಲೇ ನಾವು ಪ್ರಜಾಪ್ರಭುತ್ವದ ಉಳಿವಿಗಾಗಿ ಧ್ವನಿ ಎತ್ತಬೇಕು. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದ ಅವರು, ಜಾತ್ಯತೀತ ಆಶಯಗಳು, ಪ್ರಜಾತಂತ್ರದ ಅಡಿಪಾಯವಾದ ಸಂವಿಧಾನಕ್ಕೆ ಕುತ್ತು ಬಂದಿದ್ದು, ಪ್ರಶ್ನಿಸುವ ಮನೋಭಾವ ಕಸಿದುಕೊಳ್ಳಲಾಗುತ್ತಿದೆ. ಈ ಬೆಳವಣಿಗೆಗೆ ಈಗಲೇ ತಡೆಯೊಡ್ಡದಿದ್ದರೆ, ದೇಶಕ್ಕೆ ಅಕ್ಷರಶಃ ಅನ್ಯಾಯ ಮಾಡಿದಂತಾಗುತ್ತದೆ ಎಂದರು.

ಡಾ. ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಪಟೇಲ್  ಕಂಡ ಕನಸುಗಳನ್ನು ನನಸು ಮಾಡಬೇಕೆ ಹೊರತು, ಅವುಗಳನ್ನು ನುಚ್ಚುನೂರು ಮಾಡುವಂತಹ ಕೃತ್ಯಕ್ಕೆ ಇಳಿಯಬಾರದು. ನಿರಂತರ ಚಳವಳಿ ಮೂಲಕ ಅವರು ದೇಶಕ್ಕೆ ದೊರಕಿಸಿಕೊಟ್ಟ ಸ್ವಾತಂತ್ರ್ಯ ಮತ್ತು ಅನುಷ್ಠಾನಕ್ಕೆ ತಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳದಿದ್ದರೆ, ನಾವು ಉತ್ತಮ ಪ್ರಜೆಗಳೆಂದು ಹೇಳಿಕೊಳ್ಳಲು ಆಗುವುದಿಲ್ಲ ಎಂದು ಅವರು ನುಡಿದರು.

ಎಲ್ಲರೂ ಒಟ್ಟಿಗೆ ಸೇರಿ ಅಭಿವೃದ್ಧಿ ವಿಷಯಮಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡಬೇಕಿದೆ. ಕೆಲಸಕ್ಕೆ ಬಾರದ ವಿಚಾರಗಳನ್ನು ಮುಂದಿಟ್ಟುಕೊಂಡು ಸುಖಾಸುಮ್ಮನೆ ಚರ್ಚೆ ಮಾಡುವುದು ಸಲ್ಲ. ಪ್ರದೇಶ, ಪ್ರಗತಿ ಕುರಿತು ಅಂದ ಚೆಂದ ಪದಗಳಲ್ಲಿ ವರ್ಣನೆ ಮಾಡುವ ಬದಲು ವಾಸ್ತವಾಂಶಗಳನ್ನು ಆಧರಿಸಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್, ಶಾಸಕರಾದ ಶಾಸಕರಾದ ಡಾ. ಅಜಯ್ ಸಿಂಗ್, ಬಸವರಾಜ ಮತ್ತಿಮೂಡ, ತಿಪ್ಪಣ್ಣಪ್ಪ ಕಮಕನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದುಗಡೆ ನಿಂತುಕೊಂಡು ಸ್ವಲ್ವ ಸ್ವಲ್ಪವೇ ತರುವವರಿಗೆ ಹಾಗೂ ಅದು ರೂಢಿಸಿಕೊಂಡವರಿಗೆ ಅನುದಾನ ಸಿಗುತ್ತದೆ ಹೊರತು ನ್ಯಾಯಯುತವಾಗಿ ಸಾಲಿನಲ್ಲಿರುವವರಿಗೆ ಅನುದಾನ ಸಿಗಲ್ಲ. ವೇದಿಕೆಗಳ ಮೇಲೆ ಭಾಷಗಳ ಮೂಲಕ ಪ್ರದೇಶಾಭಿವೃದ್ಧಿ ಕುರಿತು ಭಾಷಣ ಮಾಡುವುದರ ಬದಲಿಗೆ, ನಮ್ಮ ಅಧಿಕಾರದ ಅವಧಿಯಲ್ಲಿ ಎಷ್ಟು ಅನುದಾನ ನೀಡಲು ಸಾಧ್ಯವಾಗಿದೆ ಎಂಬುದು ಮುಖ್ಯವಾಗುತ್ತದೆ.

-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನ ಹಿರಿಯ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News