ಶಾಹೀನ್ ಸಂಸ್ಥೆ ವಿರುದ್ಧದ ದೇಶದ್ರೋಹ ಪ್ರಕರಣ ತಕ್ಷಣ ಹಿಂಪಡೆಯಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

Update: 2020-02-06 18:36 GMT

ಬೆಂಗಳೂರು, ಫೆ.6: ಬೀದರ್ ಶಾಲೆಯ ಮಕ್ಕಳು ತನಗೆ ಇಷ್ಟವಾಗದ ನಾಟಕ ಪ್ರದರ್ಶಿಸಿದರು ಎನ್ನುವ ಕ್ಷುಲಕ ಕಾರಣಕ್ಕೆ ಮಕ್ಕಳು ಮತ್ತು ಹೆತ್ತವರ ಮೇಲೆ ಪೊಲೀಸರನ್ನು ಛೂ ಬಿಟ್ಟು ಹಿಂಸಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ. ಪುಟ್ಟ ಮಕ್ಕಳ ಪ್ರತಿರೋಧವನ್ನು ಎದುರಿಸಲಾಗದಷ್ಟು ಬಿಜೆಪಿ ಸೈದ‍್ಧಾಂತಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದರ್ ಶಾಲೆಯ ಮಕ್ಕಳ ನಾಟಕದಲ್ಲಿ ದೇಶದ್ರೋಹ ಕಂಡ ಕುರುಡು ಬಿಜೆಪಿ ಸರಕಾರಕ್ಕೆ ಕಲ್ಲಡ್ಕದ ಶಾಲೆಯಲ್ಲಿ ಮಕ್ಕಳು ಬಾಬರಿ ಮಸೀದಿ ಧ್ವಂಸದ ಕಾರ್ಯಾಚರಣೆಯ ಪ್ರದರ್ಶನ ನೀಡಿ ನೆಲದ ಕಾನೂನನ್ನು ಉಲ್ಲಂಘಿಸಿದ ಮತ್ತು ನ್ಯಾಯಾಲಯವನ್ನು ಅಣಕ ಮಾಡಿದ ಕಿಡಿಗೇಡಿತನ ದೇಶದ್ರೋಹವಾಗಿ ಕಾಣುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಹೌದು, ಸರ್ವಾಧಿಕಾರಿ ದುರ್ಬಲನಾದಷ್ಟು ಕ್ರೂರಿಯಾಗುತ್ತಾನೆ. ದೆಹಲಿ ವಿಶ್ವವಿದ್ಯಾಲಯಗಳಿಗೆ ಪೊಲೀಸರನ್ನು ನುಗ್ಗಿಸಿದ, ಶಾಂತಿಯುತ ಪ್ರತಿಭಟನೆಕಾರರ ಮೇಲೆ ಗುಂಡು ಹಾರಿಸಲು ಪ್ರಚೋದನೆ ನೀಡಿದ ಸರ್ವಾಧಿಕಾರಿ ಮನಸ್ಸೇ ಬೀದರ್ ನಲ್ಲಿ ಪುಟ್ಟಮಕ್ಕಳ ಮೇಲೆ ಸೇಡು ತೀರಿಸಲು ಹೊರಟಿದೆ. ಬೀದರ್ ನ ಶಾಹೀನ್ ವಿದ್ಯಾಸಂಸ್ಥೆ, ವಿದ್ಯಾರ್ಥಿಗಳು ಮತ್ತು ಹೆತ್ತವರ ಮೇಲೆ ದಾಖಲಿಸಿರುವ ದೇಶದ್ರೋಹದ ಪ್ರಕರಣವನ್ನು ಪೊಲೀಸರು ತಕ್ಷಣ ವಾಪಸು ಪಡೆಯಲು ಆಗ್ರಹಿಸುತ್ತಿದ್ದೇನೆ. ಭ್ರಷ್ಟರನ್ನು ಖರೀದಿಸಿ ಅಧಿಕಾರದಲ್ಲಿರುವ ಸರ್ಕಾರ, ಜನವಿರೋಧಿ ಕೃತ್ಯಕ್ಕಿಳಿದರೆ ನಿರೀಕ್ಷೆಗಿಂತ ಮೊದಲೇ ನಾಶವಾಗಲಿದೆ ಎಂದು ಸಿದ್ದರಾಮಯ್ಯ ಟ್ವೀಟವ ಮೂಲಕ ಹರಿಹಾಯ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News