ಕನ್ನಡ ಸಾಹಿತ್ಯ ಸಮ್ಮೇಳನ: ಜನರಿಲ್ಲದೆ ಬಣಗುಡುತ್ತಿರುವ ಸಮಾನಾಂತರ ವೇದಿಕೆಗಳು

Update: 2020-02-06 18:25 GMT

ಕಲಬುರಗಿ, ಫೆ.6: ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಮೂಲಕ ಅದ್ಧೂರಿಯಾಗಿ ನಡೆಸುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಎರಡು ಸಮಾನಾಂತರ ವೇದಿಕೆಗಳಲ್ಲಿ ನಡೆಯುತ್ತಿರುವ ಗೋಷ್ಠಿಗಳಲ್ಲಿ ಜನರೇ ಇಲ್ಲದೇ ಬಣಗುಡುತ್ತಿವೆ.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎರಡನೇ ದಿನ ವಿವಿಧ ಕಡೆಗಳಿಂದ ಜನರು ಬರುತ್ತಿದ್ದಾರೆ. ಆದರೆ, ಇಲ್ಲಿನ ಸಮಾನಾಂತರ ವೇದಿಕೆಗಳ ಕಡೆಗೆ ಜನರು ಬರುತ್ತಿಲ್ಲ. ನಾಡು, ನುಡಿ, ಯುವ ಸಮುದಾಯ, ಹೊಸ ತಂತ್ರಜ್ಞಾನ ಸೇರಿದಂತೆ ಹಲವು ವಿಷಯಗಳು ಸಮಾನಾಂತರ ವೇದಿಕೆಗಳಲ್ಲಿ ಚರ್ಚೆಗೆ ಒಳಪಡಿಸಲಾಗುತ್ತದೆ. ಆದರೆ, ಇಲ್ಲಿನ ಚರ್ಚೆಗಳು ಕೇವಲ ವೇದಿಕೆ ಹಾಗೂ ಖಾಲಿ ಉಳಿಯುತ್ತಿರುವ ಕುರ್ಚಿಗಳಿಗೆ ಸೀಮಿತವಾಗುತ್ತಿದೆ ಎಂದು ಅನ್ನಿಸತೊಡಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಸಮಾನಾಂತರ ವೇದಿಕೆಯು ವಿವಿ ಪ್ರವೇಶ ದ್ವಾರದ ಬಳಿಯೇ ಇದೆ. ಆದರೆ, ಇಲ್ಲಿ ಸಮಾನಾಂತರ ವೇದಿಕೆಯಿದೆ ಎಂಬುದೇ ಯಾರಿಗೂ ತಿಳಿದಿಲ್ಲ. ಇನ್ನು ಮಹಾತ್ಮ ಗಾಂಧಿ ಸಮಾನಾಂತರ ವೇದಿಕೆ ಎಲ್ಲಿದೆ ಎಂಬುದೇ ಮಾಹಿತಿಯಿಲ್ಲ. ಇನ್ನು ಈ ಎರಡೂ ವೇದಿಕೆಗಳಿಂದ ಮುಖ್ಯ ವೇದಿಕೆಗೆ ಸರಿಸುಮಾರು ಒಂದೆರಡು ಕಿ.ಮೀ.ನಷ್ಟು ಅಂತರವಿದೆ. ಹೀಗಾಗಿ, ಸಮ್ಮೇಳನಕ್ಕೆ ಬರುವ ಎಲ್ಲರೂ ಮುಖ್ಯ ವೇದಿಕೆಗೆ ಹೋಗುತ್ತಿರುವುದು ಕಂಡುಬರುತ್ತಿದೆ.

ಮುಖ್ಯ ವೇದಿಕೆಯ ಬಳಿ ಪುಸ್ತಕ ಮಳಿಗೆ, ಆಹಾರ ಕೌಂಟರ್ ಗಳಿವೆ. ಸಮ್ಮೇಳನಕ್ಕೆ ಬರುವ ಬಹುತೇಕರು ಪುಸ್ತಕ ಮಳಿಗೆಗೆ ಭೇಟಿ ನೀಡುತ್ತಾರೆ. ಹೀಗಾಗಿ, ಸಮಾನಾಂತರ ವೇದಿಕೆಗಳು ಮುಖ್ಯ ವೇದಿಕೆ ಬಳಿಯೇ ಇರಬೇಕಿತ್ತು. ಆಯೋಜಕರ ನಿರ್ಲಕ್ಷ್ಯ ಧೋರಣೆಯಿಂದ ಸಮಾನಾಂತರ ವೇದಿಕೆಗಳಲ್ಲಿನ ಚರ್ಚೆಗಳು ಸಾರ್ವಜನಿಕ ಚರ್ಚೆಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.

ಮಾಹಿತಿ ನೀಡದ ಆಯೋಜಕರು: ಸಮಾನಾಂತರ ವೇದಿಕೆಗಳು ಹತ್ತಿರದಲ್ಲಿ ನಿರ್ಮಾಣ ಮಾಡಬೇಕಿದೆ. ಒಂದು ವೇಳೆ ದೂರವಿದ್ದಾಗ ಮುಖ್ಯ ವೇದಿಕೆಯಿಂದ ಇಂತಹ ಕಡೆ ಸಮಾನಾಂತರ ವೇದಿಕೆಗಳಿವೆ, ಅಲ್ಲಿ ನಡೆಯುವ ಚರ್ಚೆಯ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕಿತ್ತು. ಆದರೆ, ಆಯೋಜಕರಿಗೆ ಸಮಾನಾಂತರ ವೇದಿಕೆಗಳು ಕೇವಲ ಹೆಸರಿಗಷ್ಟೇ ಇವೆ ಎಂಬಂತಾಗಿದೆ.

ಸಾಹಿತ್ಯ ಸಮ್ಮೇಳನದಲ್ಲಿ ಹಲವು ವಿಷಯಗಳು ಒಂದೇ ವೇದಿಕೆಯಲ್ಲಿ ಚರ್ಚೆಗೆ ಅವಕಾಶವಿರುವುದಿಲ್ಲ ಎಂಬ ಕಾರಣಕ್ಕೆ ಸಮಾನಾಂತರ ವೇದಿಕೆ ಮಾಡುತ್ತಾರೆ. ಆದರೆ, ಅವುಗಳನ್ನು ಮುಖ್ಯ ವೇದಿಕೆಯ ಬಳಿ ಇದ್ದರೆ ಮತ್ತಷ್ಟು ಅನುಕೂಲಕರ. ಇಲ್ಲಿ ಸುಮಾರು ದೂರ ನಡೆಯಬೇಕು. ಅದಕ್ಕಾಗಿ ಈ ವೇದಿಕೆಗಳಿಗೆ ಬರಲು ಆಗಲ್ಲ.

- ಶಂಕರಪ್ಪ, ಪ್ರತಿನಿಧಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News