ದಿಲ್ಲಿ ಉಪ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯ ಬಂಧನ: ಕಠಿಣ ಕ್ರಮಕೈಗೊಳ್ಳಲು ಸಿಸೋಡಿಯ ಆಗ್ರಹ

Update: 2020-02-07 05:00 GMT

ಹೊಸದಿಲ್ಲಿ, ಫೆ.7: ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕಚೇರಿಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿ(ಒಸಿಡಿ)ಆಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ಲಂಚ ಸ್ವೀಕಾರ ಆರೋಪದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ವಿಚಾರಣೆಗೆ ಒಳಪಟ್ಟಿದ್ದಾರೆ. ಈ ಕುರಿತು ಮೊದಲ ಬಾರಿ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಸಿಸೋಡಿಯಾ, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸಿಬಿಐಗೆ ಆಗ್ರಹಿಸಿದ್ದಾರೆ.

ಹಿರಿಯ ಅಧಿಕಾರಿಯನ್ನು ಬಂಧಿಸಿರುವ ಸುದ್ದಿಯನ್ನು ದೃಢಪಡಿಸಿದ ಸಿಸೋಡಿಯಾ, ‘‘ಲಂಚ ಪಡೆಯುತ್ತಿದ್ದ ಜಿಎಸ್‌ಟಿ ಇನ್ಸ್‌ಪೆಕ್ಟರ್‌ರನ್ನು ಬಂಧಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಅಧಿಕಾರಿಯು ನನ್ನ ಕಚೇರಿಯಲ್ಲಿ ಒಎಸ್‌ಡಿ ಹುದ್ದೆಯಲ್ಲಿದ್ದರು. ಸಿಬಿಐ ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕಳೆದ 5 ವರ್ಷಗಳಲ್ಲಿ ನಾನು ಇಂತಹ ಬಹಳಷ್ಟು ಭ್ರಷ್ಟ ಅಧಿಕಾರಿಗಳನ್ನು ಪಡೆದಿದ್ದೇನೆ’’ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

 ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದ ಅಧಿಕಾರಿಯನ್ನು 2 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದಲ್ಲಿ ಸಿಬಿಐ ಗುರುವಾರ ಬಂಧಿಸಿತ್ತು. ಜಿಎಸ್‌ಟಿ ವಿಚಾರಕ್ಕೆ ಸಂಬಂಧಿಸಿ ಗೋಪಾಲ್‌ಕೃಷ್ಣ ಮಾಧವ್ ಎಂಬ ಅಧಿಕಾರಿ ಲಂಚ ಸ್ವೀಕರಿಸಿದ್ದ. ಮಾಧವ್‌ನನ್ನು ವಿಚಾರಣೆ ನಡೆಸಲು ತಕ್ಷಣವೇ ಸಿಬಿಐ ಮುಖ್ಯ ಕಚೇರಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ತನಕ ಈ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಸಿಸೋಡಿಯಾ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಮಾಧವ್ 2015ರಿಂದ ಮನೀಷ್ ಸಿಸೋಡಿಯಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ದಿಲ್ಲಿಯ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಎರಡು ದಿನಗಳ ಮುಂಚಿತವಾಗಿ ಅಧಿಕಾರಿಯ ಬಂಧನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News