×
Ad

ಕುಮಾರಸ್ವಾಮಿ ಸೀರಿಯಸ್ ರಾಜಕಾರಣಿಯೇ ಅಲ್ಲ: ಸಚಿವ ಶ್ರೀರಾಮುಲು

Update: 2020-02-07 17:44 IST

ಚಿಕ್ಕಮಗಳೂರು, ಫೆ.7: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೀರಿಯಸ್ ರಾಜಕಾರಣಿಯೇ ಅಲ್ಲ, ಅವರು ಏನಾದರು ಮಾತನಾಡುವ ಸಂದರ್ಭದಲ್ಲಿ ಕೀಳುಮಟ್ಟದ ಪದ ಬಳಕೆ ಮಾಡುತ್ತಾರೆ. ಅವರ ಭಾಷೆಯೇ ಬೇರೆ ನನ್ನ ಭಾಷೆಯೇ ಬೇರೆ ಎಂದು ಆರೋಗ್ಯ ಇಲಾಖೆ ಸಚಿವ ಶ್ರೀರಾಮುಲು ಟೀಕಿಸಿದ್ದಾರೆ.

ಶುಕ್ರವಾರ ಚಿಕ್ಕಮಗಳೂರು ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ನಾನು ವೈಯಕ್ತಿಕವಾಗಿ ಯಾವುದೇ ಟೀಕೆ ಮಾಡುವುದಿಲ್ಲ, ಯಾರ ಮನೆ ಯಾರು ಹಾಳು ಮಾಡಿದ್ದಾರೆಂದು ರಾಜ್ಯದ ಜನತೆಗೆ ಚೆನ್ನಾಗಿ ತಿಳಿದಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು. 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತಮವಾಗಿ ಸರಕಾರ ನಡೆಸುತ್ತಿದ್ದಾರೆ. ಅವರಿಗೆ ನನ್ನ ಮೇಲೆ ಪ್ರೀತಿ ಇದೆ. ಮುಂದೇ ಅವಕಾಶ ಬಂದಾಗ ನನಗೆ ಡಿಸಿಎಂ ಹುದ್ದೆ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. ಅವರ ಅಧಿಕಾರವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಮಾಡಿಟ್ಟು ಹೋಗಿದ್ದಾರೆ. ಹದಗೆಟ್ಟಿರುವ ಆರ್ಥಿಕ ಪರಿಸ್ಥಿಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಸರಿಪಡಿಸುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡುತ್ತಿದ್ದಾರೆ. ಸದ್ಯ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದರು.

ಕೊರೊನ ವೈರಸ್ ರಾಜ್ಯದಲ್ಲಿ ಹರಡದಂತೆ ಆರೋಗ್ಯ ಇಲಾಖೆ ವತಿಯಿಂದ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನುಮಾನವಿದ್ದ 97 ಜನರ ರಕ್ತದ  ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 67 ಜನರ ರಕ್ತದ ಮಾದರಿಯ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿವೆ. ಉಳಿದವರ ಮೇಲೂ ನಿಗಾ ವಹಿಸಲಾಗಿದ್ದು, ಶೀಘ್ರ ಪ್ರಯೋಗಾಲಯದಿಂದ ವರದಿ ಬರಲಿದೆ ಎಂದರು.

ನೆರೆಯ ಕೇರಳ ರಾಜ್ಯದಲ್ಲಿ ವೈರಸ್ ಕೊರೊನ ವೈರಸ್ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬರುವ ಕೇರಳ ಪ್ರವಾಸಿಗರ ಮೇಲೆ ನಿಗಾ ವಹಿಸಲಾಗಿದೆ. ಕೊರೊನ ವೈರಸ್ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮೊಬೈಲ್ ಎಲ್.ಇ.ಡಿ ವ್ಯಾನ್‍ಗೆ ಚಾಲನೆ ನೀಡಲಾಗಿದೆ. ಈ ವ್ಯಾನ್ ರಾಜ್ಯದ 17 ಜಿಲ್ಲೆಗಳಲ್ಲಿ ಈಗಾಗಲೇ ಜಾಗೃತಿ ಕಾರ್ಯನಿರ್ವಹಿಸಿದ್ದು, ಕೊರೊನ ವೈರಸ್ ಬಾರದಂತೆ ಆರೋಗ್ಯ ಇಲಾಖೆ ಅತ್ಯಗತ್ಯವಾಗಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ ಸಾರ್ವಜನಿಕರಲ್ಲೂ ಅರಿವು ಮೂಡಿಸಲಾಗುತ್ತಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News