ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಮಾಲಕರು, ಆಟಗಾರರು ಸೇರಿ 16 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್
ಬೆಂಗಳೂರು, ಫೆ. 7: ಕೆಪಿಎಲ್ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು ನಗರದ ಮೂರು ಪೊಲೀಸ್ ಠಾಣೆಗಳ ಮೂಲಕ 16 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಕೆಪಿಎಲ್‌ನ ಎರಡು ತಂಡಗಳ ಮಾಲಕರು ಮತ್ತು ಆರು ಮಂದಿ ಆಟಗಾರರು ದೋಷಾರೋಪಣಾ ಪಟ್ಟಿಯಲ್ಲಿ ಆರೋಪಿಗಳಾಗಿದ್ದಾರೆ. ಎರಡು ವರ್ಷಗಳ ಹಿಂದೆ ಈ ಹಗರಣ ಬೆಳಕಿಗೆ ಬಂದಿತ್ತು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೆತ್ತಿಕೊಂಡ ಸಿಸಿಬಿಯವರು ಮೂರು ಪ್ರಕರಣಗಳಲ್ಲಿ ಒಟ್ಟು 16 ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣ ಸಂಬಂಧ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲಕ ಮುಸ್ತಾಕ್ ಆಲಿತಾರ, ಬಳ್ಳಾರಿ ಟಸ್ಕರ್ ತಂಡದ ಮಾಲಕ ಅರವಿಂದ ವೆಂಕಟೇಶರೆಡ್ಡಿ, ಕೆಎಸ್‌ಸಿಎ ಆಡಳಿತ ಮಂಡಳಿ ಸದಸ್ಯರು ಹಾಗೂ ಬೆಳಗಾವಿ ಪ್ಯಾಂಥರ್ಸ್ ತರಬೇತುದಾರರಾಗಿದ್ದ ಸುಧೀಂದ್ರ ಶಿಂಧೆ, ಬಳ್ಳಾರಿ ಟಸ್ಕರ್ ತಂಡದ ನಾಯಕ ಸಿ.ಎಂ.ಗೌತಮ್, ವಿಕೆಟ್ ಕೀಪರ್ ಅಬ್ರಾರ್ ಕಾಜಿ ಮತ್ತು ಬುಕ್ಕಿ ಅಮಿತ್ ಮಾವಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ. ನಗರದ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.