ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಪ್ಪುಪಟ್ಟಿ ಕಟ್ಟಿ ಕವನ ವಾಚನ: ಕಾರಣ ಏನು ಗೊತ್ತೇ ?

Update: 2020-02-07 14:56 GMT

ಕಲಬುರಗಿ, ಫೆ.7: ಶೃಂಗೇರಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸರಕಾರ ಮೂಗು ತೂರಿಸಿದೆ ಎಂದು ಆರೋಪಿಸಿ ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕವಿಯೊಬ್ಬರು ಕಪ್ಪುಪಟ್ಟಿ ಧರಿಸಿ ಕವಿತೆ ವಾಚಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಲಬರ್ಗಾ ವಿವಿ ಆವರಣದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಾತ್ಮ ಗಾಂಧಿ ಸಮಾನಾಂತರ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕವಿ ನಂದೀಶ್ ಬಂಕೇನಹಳ್ಳಿ ಅವರು, ಅಪ್ಪ ಮತ್ತು ಕನ್ನಡ ಎಂಬ ಕವಿತೆಯನ್ನು ವಾಚಿಸಿದರು. ಈ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿ ಕವನ ವಾಚಿಸುವ ಮೂಲಕ ಸರಕಾರದ ಮಧ್ಯಪ್ರವೇಶವನ್ನು ಖಂಡಿಸಿದರು.

ಕವನ ವಾಚನದ ಬಳಿಕ 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಹೀಗಾಗಿ, ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕಸಾಪದ ಎಲ್ಲ ತಾಲೂಕು ಅಧ್ಯಕ್ಷರ ಸಮ್ಮುಖದಲ್ಲಿ ಒಮ್ಮತದಿಂದ ತೀರ್ಮಾನ ಮಾಡಿ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಆದರೆ ಸರಕಾರ ಮಧ್ಯೆ ಮೂಗು ತೂರಿಸುವ ಕೆಲಸ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ 100 ವರ್ಷಗಳ ಇತಿಹಾಸವಿದೆ. ಅಂತಹ ಸಂಸ್ಥೆಯು ಒಂದು ಸಮ್ಮೇಳನಕ್ಕೆ ಆಯ್ಕೆ ಮಾಡಿದ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ಸರಕಾರ ಹಾಗೂ ಇಲಾಖೆಯ ಸಚಿವರೊಬ್ಬರು ಹೇಳಿರುವುದು ಸರಿಯಲ್ಲ. ಅಲ್ಲದೆ, ಸರಕಾರ ಸಮ್ಮೇಳನಕ್ಕೆ ಅನುದಾನ ಖಡಿತ ಮಾಡಿದ ಕ್ರಮವೂ ಸರಿಯಲ್ಲ. ಇದನ್ನು ಖಂಡಿಸಿ ನಾನು ಕಪ್ಪು ಪಟ್ಟಿ ಕಟ್ಟಿಕೊಂಡು ಕವನ ವಾಚನ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News