×
Ad

ಕನ್ನಡ ಸಂಘಟನೆಗಳ ಒಕ್ಕೂಟದಿಂದ ಫೆ.13ಕ್ಕೆ ‘ಕರ್ನಾಟಕ ಬಂದ್’ ಕರೆ

Update: 2020-02-07 21:51 IST

ಬೆಂಗಳೂರು, ಫೆ. 7: ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಸಂಬಂಧದ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಫೆ.13ಕ್ಕೆ ಕರ್ನಾಟಕ ರಾಜ್ಯ ಬಂದ್‌ಗೆ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿವೆ.

ಶುಕ್ರವಾರ ಇಲ್ಲಿನ ಮೌರ್ಯ ವೃತ್ತದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ನಾಗೇಶ್, ಮಹಿಷಿ ವರದಿ ಜಾರಿಗೆ ಆಗ್ರಹಿಸಿ 96 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ರಾಜ್ಯ ಸರಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಫೆ.13ಕ್ಕೆ ಬಂದ್ ಕರೆ ನೀಡಲಾಗಿದೆ ಎಂದರು.

ನೂರಕ್ಕೂ ಹೆಚ್ಚು ಕನ್ನಡಪರ, ರೈತ ಮತ್ತು ದಲಿತ ಸಂಘಟನೆಗಳು ಹಾಗೂ ಟ್ಯಾಕ್ಸಿ, ಲಾರಿ ಮಾಲಕರು-ಚಾಲಕ ಸಂಘಟನೆಗಳು, ಓಲಾ, ಉಬರ್ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಲಿದ್ದು, ಫೆ.13ರ ಬೆಳಗ್ಗೆ ಪುರಭವನದಲ್ಲಿ ಫ್ರೀಡಂ ಪಾರ್ಕ್ ವರೆಗೂ ರ‍್ಯಾಲಿ ನಡೆಸಲಾಗುವುದು ಎಂದರು.

ಐಟಿ-ಬಿಟಿ ಸೇರಿದಂತೆ ರಾಜ್ಯದ ಎಲ್ಲ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಉದ್ಯೋಗ ನೀಡಬೇಕು ಎಂಬುದು ಸೇರಿ 14 ಶಿಫಾರಸ್ಸುಗಳನ್ನು ಮಹಿಷಿ ವರದಿಯಲ್ಲಿ ಮಾಡಲಾಗಿತ್ತು. ಆದರೆ, ರಾಜ್ಯ ಸರಕಾರ ಇದೀಗ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇ.75ರಷ್ಟು ಉದ್ಯೋಗ ಕಲ್ಪಿಸುವ ಸಂಬಂಧ ಕಾಯ್ದೆ ಜಾರಿಗೆ ತರಲು ಉದ್ದೇಶಿಸಿದೆ. ಆದರೆ, ಕನ್ನಡಿಗರ ಹೋರಾಟಕ್ಕೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಬಂದ್ ಕರೆ ನೀಡಬೇಕಾಗಿದೆ. ಹೀಗಾಗಿ ಈ ಬಂದ್‌ಗೆ ಕನ್ನಡದ ಎಲ್ಲ ಬಂಧುಗಳು, ಎಲ್ಲ ಸಂಘ-ಸಂಸ್ಥೆಗಳು ಬೆಂಬಲ ನೀಡಬೇಕು ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News