ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಾಗಲಿ

Update: 2020-02-07 16:31 GMT

ಕಲಬುರಗಿ,ಫೆ.7: ರಾಜ್ಯದ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಸೇರಿದಂತೆ ಆರು ಪ್ರಮುಖ ನಿರ್ಣಯಗಳನ್ನು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡನೆ ಮಾಡಿ ಅಂಗೀಕರಿಸಲಾಗಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ 85ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಕಸಾಪ ಗೌರವಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ನಿರ್ಣಯಗಳನ್ನು ಮಂಡನೆ ಮಾಡಿದರು.

ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಮ್ಮೇಳನ ನಡೆಸಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಹಾಗೂ ಸ್ವಾಗತ ಸಮಿತಿ, ಉಪ ಸಮಿತಿಗಳಲ್ಲಿ ದುಡಿದವರಿಗೆ, ಜಿಲ್ಲಾಡಳಿತಕ್ಕೆ, ಕಸಾಪ ಅಧ್ಯಕ್ಷರು ಹಾಗೂ ಎಲ್ಲ ಸಮಿತಿಗಳಿಗೆ ಮೊದಲನೇ ನಿರ್ಣಯ ಮಂಡನೆ ಮಾಡಿ ಅಭಿನಂದನೆ ಸಲ್ಲಿಸಲಾಯಿತು.

371 ಜೆ ಕಲಂನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ಸಮಗ್ರ ಅನುಷ್ಠಾನಕ್ಕೆ ಸರಕಾರ ಮುಂದಾಗಬೇಕು. ಅದರ ಜತೆಗೆ ಡಿ.ಎಂ.ನಂಜುಂಡಪ್ಪ ವರದಿ ಮಾಡಿ, ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಬೇಕು. ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಕಾಲಮಿತಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಈ ಸಮ್ಮೇಳನದಲ್ಲಿ ನಿರ್ಣಯ ಮಂಡಿಸಲಾಯಿತು.

ಆಂಧ್ರಪ್ರದೇಶ ರಾಜ್ಯದಲ್ಲಿನ ಕನ್ನಡ ಶಾಲೆಗಳನ್ನು ಅಲ್ಲಿನ ಸರಕಾರ ಮುಚ್ಚುತ್ತಿದ್ದು, ಅದನ್ನು ಈ ಸಮ್ಮೇಳನ ತೀವ್ರವಾಗಿ ಖಂಡಿಸುತ್ತಿದೆ. ಆಂದ್ರಪ್ರದೇಶ ಕನ್ನಡ ಶಾಲೆಗಳು ಮಾತ್ರವಲ್ಲದೆ ಗಡಿ ಪ್ರದೇಶದಲ್ಲಿನ ಇತರೆ ರಾಜ್ಯಗಳ ಗಡಿಯಲ್ಲಿರುವ ಕನ್ನಡ ಶಾಲೆಗಳೂ ಮುಚ್ಚದಂತೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿ ನಿರ್ಣಯ ಮಂಡಿಸಲಾಯಿತು.

ಕರ್ನಾಟಕದೊಂದಿಗೆ ಗಡಿ ವಿವಾದವನ್ನು ಕೆದಕುತ್ತಿರುವ ಮಹಾರಾಷ್ಟ್ರ ಸರಕಾರದ ಉದ್ಧಟತನವನ್ನು ಕನ್ನಡ ಸಾಹಿತ್ಯ ಸಮ್ಮೇಳನ ತೀವ್ರವಾಗಿ ಖಂಡಿಸುತ್ತದೆ ಮತ್ತು ಮಹಾಜನ ವರದಿಯೇ ಅಂತಿಮ ಹಾಗೂ ಅದನ್ನು ಅನುಷ್ಠಾನಗೊಳಿಸುವ ಮೂಲಕ ಈ ವಿವಾದವನ್ನು ಅಂತ್ಯಗೊಳಿಸಬೇಕು ಎಂದು ಸಮ್ಮೇಳನ ನಿರ್ಣಯ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News