ಸರಕಾರ ಸಿಎಎ ಕುರಿತು ಜಾಗೃತಿ ಮೂಡಿಸಲಿ: ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್.ಎಸ್.ವೆಂಕಟೇಶ ಮೂರ್ತಿ

Update: 2020-02-07 17:15 GMT

ಕಲಬುರಗಿ, ಫೆ.7: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ದೇಶದಲ್ಲಿ ಬಹುಚರ್ಚಿತ ವಿಷಯವಾಗಿದೆ. ಹೀಗಾಗಿ ಸರಕಾರಗಳು ಈ ಕಾಯ್ದೆಯ ಕುರಿತು ಸ್ಪಷ್ಟವಾದ ಅರಿವು ಮೂಡಿಸಲಿ. ಇದೇ ನನ್ನ ಸ್ಪಷ್ಟ ಅಭಿಪ್ರಾಯ ಎಂದು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್.ಎಸ್.ವೆಂಕಟೇಶ ಮೂರ್ತಿ ತಿಳಿಸಿದ್ದಾರೆ.

ಶುಕ್ರವಾರ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಆಯೋಜಿಸಿದ್ದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಿಎಎ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಯಾವ ಕಾರಣಕ್ಕೂ ಭಾರತವನ್ನು ಎರಡಾಗದಂತೆ, ಅಖಂಡ ಭಾರತವಾಗಿಯೇ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವೆಂದು ತಿಳಿಸಿದರು.

ಕೃತಿಯೊಂದನ್ನು ನಿಷೇಧಿಸುವುದು ಸರಿಯೇ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ಕೃತಿಯೊಂದನ್ನು ನಿಷೇಧಿಸುವುದು ಸರಿಯೇ ಎಂದು ಕತೆಗಾರ ವಸುದೇಂದ್ರ ಕೇಳಿದ ಪ್ರಶ್ನೆಗೆ, ನಮ್ಮ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕಾಗಿದೆ. ಇದನ್ನು ಕಸಿದುಕೊಳ್ಳುವ ಹಕ್ಕು ಯಾವ ಪ್ರಭುತ್ವಕ್ಕೂ ಇಲ್ಲ. ಒಂದು ವೇಳೆ ಕೃತಿ ನಿಷೇಧಕ್ಕೆ ಒಳಗಾದರೆ, ಸಾಹಿತ್ಯ ವಲಯದಿಂದ ಅಷ್ಟೇ ಪ್ರಮಾಣದ ಪ್ರತಿರೋಧ ವ್ಯಕ್ತವಾಗಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.

ನಿಮಗೆ ಸಿಟ್ಟು ಬರುವುದಿಲ್ಲವೇ: ನಿಮ್ಮ ಕಾವ್ಯ, ಕತೆ, ನಾಟಕಗಳಲ್ಲಿ ಎಲ್ಲಿಯೂ ಸಿಟ್ಟು ಕಾಣಿಸಿಕೊಳ್ಳುವುದಿಲ್ಲ. ಹಾಗಾದರೆ ನಿಮಗೆ ಸಿಟ್ಟೇ ಬರುವುದಿಲ್ಲವೇ ಎಂಬ ಪ್ರಶ್ನೆಗೆ, ಪ್ರತಿಯೊಬ್ಬರಿಗೂ ರಾಗ, ದ್ವೇಷಗಳು ಪ್ರಾಕೃತವಾಗಿ ಇರುವಂತಹದ್ದೆ. ಆದರೆ, ಅದನ್ನು ನಾನು ಕ್ರೀಯಾಶೀಲತೆಯಾಗಿ ಪರಿವರ್ತಿಸಿಕೊಳ್ಳುತ್ತೇನೆಂದು ಅವರು ಹೇಳಿದರು.

ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಸಂಸ್ಕೃತ ಇಲ್ಲವೇ ಪ್ರಾಕೃತ ಭಾಷೆಯನ್ನು ಸೇತುವೆಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಯಾಗಿ ಜಾರಿಗೆ ತರಬೇಕೆಂಬ ನನ್ನ ಅಭಿಪ್ರಾಯವು ಸಲಹೆ ಮಾತ್ರವೇ ಹೊರತು ಯಾವ ಒಳಮರ್ಮವೂ ಇಲ್ಲ. ನನ್ನ ಸಲಹೆಯನ್ನು ದೇಶದ ಜನತೆ ವಿರೋಧಿಸಿದರೆ ಅದು ಬೇಡ. ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗೂ ತ್ರಿಭಾಷಾ ಸೂತ್ರಕ್ಕೂ ಯಾವುದೇ ಸಂಬಂಧವಿಲ್ಲ. ತ್ರಿಭಾಷಾ ಸೂತ್ರದ ಪ್ರಕಾರ ಹಿಂದಿಯೇ ಮೂರನೇ ಭಾಷೆ ಆಗಬೇಕಿಲ್ಲ.
-ಎಚ್.ಎಸ್.ವೆಂಕಟೇಶ ಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News