ಭಾಷೆಯ ವಿಷಯದಲ್ಲಿ ನಾವು ಕಠಿಣವಾಗಿಯೇ ಇರೋಣ: ಸಿದ್ದರಾಮಯ್ಯ ಕರೆ
ಕಲಬುರಗಿ, ಫೆ.7: ಮನುಷ್ಯತ್ವಕ್ಕೆ ಉದಾರತೆಯಿರಲಿ. ಆದರೆ ಭಾಷೆಯ ವಿಷಯದಲ್ಲಿ ನಾವು ಕಠಿಣವಾಗಿಯೇ ಇರೋಣ ಎಂದು ರಾಜ್ಯದ ಜನತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಖಂಡ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕಲ್ಯಾಣ ಕರ್ನಾಟಕ ಕನ್ನಡದ ಗಂಡು ಮೆಟ್ಟಿದ ನೆಲ. ನಿಜಾಮರು ಆಳಿರಬಹುದು. ಆದರೆ, ಕನ್ನಡವೇ ಮೇಲೆ ಇತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಂತೀಯ ಭಾಷೆಗಳನ್ನು ರಕ್ಷಣೆ ಮಾಡಲು ಸಂವಿಧಾನದ ತಿದ್ದುಪಡಿ ಅಗತ್ಯವಿದೆ. ಹೀಗಾಗಿ, ಕೇಂದ್ರ ಸರಕಾರ ರಾಜ್ಯದ ಎಲ್ಲ ಮುಖ್ಯಮಂತ್ರಿಗಳ ಸಭೆ ಕರೆಯುವ ಮೂಲಕ ಅವರ ಅಭಿಪ್ರಾಯ ಪಡೆದು, ಪ್ರಾಂತೀಯ ಭಾಷೆಗಳ ರಕ್ಷಣೆಗೆ ಮುಂದಾಗಬೇಕು ಎಂದರು. ಪ್ರಾಂತೀಯ ಭಾಷೆಗಳ ಉಳಿವಿಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬೇಕು. ಸ್ಥಳೀಯ ಭಾಷೆಗಳಿಗೆ ಮೊದಲ ಆದ್ಯತೆ ನೀಡುವಂತೆ ಕಾನೂನು ರೂಪಿಸಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದೆ. ಇಂಗ್ಲಿಷ್ ಶಾಲೆ ತೆರೆಯುತ್ತೇವೆ, ಕನ್ನಡ ಮಾಧ್ಯಮ ಇಟ್ಟುಕೊಳ್ಳುತ್ತೇವೆ ಎನ್ನುವುದು ಎರಡು ದೋಣಿಗಳ ಮೇಲೆ ಕಾಲಿಡುವ ಸಂಸ್ಕೃತಿ ಎಂದು ಅವರು ಜರಿದರು.
ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಕಲಿಸಬೇಕು. ಪೋಷಕರಿಂದ ಇದಕ್ಕೆ ಬೆಂಬಲ ಇಲ್ಲದಿದ್ದಾಗ ಕನ್ನಡ ಭಾಷೆಗೆ ಬೆಲೆ ಇರುವುದಿಲ್ಲ. ನಮ್ಮ ಮಾತೃ ಭಾಷೆ ಕನ್ನಡ. ಕನ್ನಡ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ. ನಾನು ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದಾಗ ಕನ್ನಡ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಿದ್ದೆ. ಕನ್ನಡ ನಾಡಿನಲ್ಲಿ ಕನ್ನಡ ಆಡಳಿತ ಭಾಷೆಯಾಗದೆ, ಬೇರೆ ಭಾಷೆ ಆಡಳಿತ ಭಾಷೆಯಾಗಲು ಅವಕಾಶ ಮಾಡಕೊಡಬಾರದು ಎಂದು ಅವರು ನುಡಿದರು.
ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಇಂಗ್ಲಿಷ್ ನಲ್ಲಿ ಟಿಪ್ಪಣಿ ಮಾಡಿದರೆ ವಾಪಸ್ ಕಳುಹಿಸುತ್ತಿದ್ದೆ. ಕನ್ನಡ ಆಡಳಿತ ಭಾಷೆಯಾಗಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ. ಕೆಲವರಿಗೆ ಉದಾರತೆ ಇರುತ್ತದೆ. ಉದಾರತೆ ನಮ್ಮ ಭಾಷೆಗೆ ಧಕ್ಕೆಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸಬಾರದು. ಸಾಹಿತ್ಯ ರಚನೆ ನಮ್ಮ ಸಂವಿಧಾನ ನೀಡಿರುವ ಹಕ್ಕು. ಆ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಅವರು ತಿಳಿಸಿದರು.
ಅಂಬೇಡ್ಕರ್ ಅವರು ನೀಡಿರುವ ಹಕ್ಕುಗಳನ್ನು ಹತ್ತಿಕ್ಕುವ ಅಧಿಕಾರ ಯಾರಿಗೂ ಇಲ್ಲ. ಬೀದರ್ ನ ಶಾಹೀನ್ ಶಾಲೆಯಲ್ಲಿ ಮಕ್ಕಳು ಸಿಎಎ ವಿರುದ್ಧ ನಾಟಕ ಮಾಡಿದ್ದಕ್ಕೆ, ಅವರೊಂದಿಗೆ ನಡೆದುಕೊಳ್ಳುತ್ತಿರುವ ಕ್ರಮ, ಮಕ್ಕಳೊಂದಿಗೆ ವರ್ತಿಸುತ್ತಿರುವ ಕ್ರಮ ಸರಿಯಲ್ಲ. ಸಂವಿಧಾನದ ಮೂಲ ಆಶಯ ಬದಲಾವಣೆಗೆ ಯಾರಿಗೂ ಅಧಿಕಾರವಿಲ್ಲ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
371(ಜೆ) ಕಲಂ ಗೆ ವಿರೋದ ಮಾಡಿದವರು ಯಾರೆಂದು ಗೊತ್ತಿದೆ. ಮನಮೋಹನ್ ಸಿಂಗ್ ಇದ್ದಾಗ ಇದಕ್ಕೆ ತಿದ್ದುಪಡಿ ಮಾಡಿ ಕಲಂ ಜೆ ಸೇರಿಸಿದರು. ರಾಜ್ಯದಲ್ಲಿ ಹಿಂದುಳಿದ, ಅತಿ ಹಿಂದುಳಿದ ಪ್ರದೇಶಗಳನ್ನು ಜಿಲ್ಲೆಗಳನ್ನಾಗಿ ಮಾಡಲಾಯಿತು. ಹೈದರಾಬಾದ್ ಕರ್ನಾಟಕ ಅಭಿವೃದ್ದಿಗೆ , ಶಿಕ್ಷಣ. ಉದ್ಯೋಗದಲ್ಲಿ ಮೀಸಲಾತಿ ನೀಡಲಾಗಿತ್ತು. ಅಭಿವೃದ್ದಿಗೂ ಒತ್ತು ನೀಡಲಾಗಿದೆ ಎಂದರು.
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, ಬಿಸಿಲ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ ನಡೆದಿದ್ದು, ಹೂವಿನಂತಿತ್ತು. ಬಿಸಿಲ ನಾಡಲ್ಲ ಹೊಂಬಿಸಿಲ ನಾಡು. ಮೆರವಣಿಗೆ ಸಂಭ್ರಮ ನಾನು ಮದುವೆಯಾದಾಗ ಹೆಂಡತಿ ಜತೆಗಿನ ಮೆರವಣಿಗೆಗಿಂತ ಅಭೂತಪೂರ್ವವಾಗಿತ್ತು. ಕಲಬುರಗಿ ಜನತೆಗೆ ಸಾಹಿತಿಗಳ ಬಗ್ಗೆ ಅಪಾರ ಅಭಿಮಾನ. ಇಂತಹ ಅಭಿಮಾನ ಹಿಂದೆ ಕಂಡಿಲ್ಲ, ಮುಂದೆ ಕಂಡು ಬರುವುದೋ ಗೊತ್ತಿಲ್ಲ. ಕನ್ನಡದ ಕೆಲಸಕ್ಕೆ ಪಕ್ಷಾತೀತವಾಗಿ ಸಿಎಂ ಮತ್ತು ಮಾಜಿ ಸಿಎಂ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.