ಅನುಭವ ಮಂಟಪಕ್ಕೆ 100 ಕೋಟಿ ರೂ. ಅನುದಾನ: ಸಿಎಂ ಯಡಿಯೂರಪ್ಪ ಭರವಸೆ

Update: 2020-02-07 17:30 GMT

ಬೀದರ್, ಫೆ.7: ಮುಂಬರುವ ಆಯವ್ಯಯದಲ್ಲಿ ಅನುಭವ ಮಂಟಪದ ನಿರ್ಮಾಣಕ್ಕೆ 100 ಕೋಟಿ ರೂ.ಗಳನ್ನು ತೆಗೆದಿರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಇಂದು ನಗರದಲ್ಲಿ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದ ಹೆಸರು ಅನಾವರಣಗೊಳಿಸಿ, ಭಾಲ್ಕಿ ಹಿರೇಮಠ ಸಂಸ್ಥಾನದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಮಿತಿ ರಚಿಸಲಾಗುವುದು. ಅನುಭವ ಮಂಟಪದ ಎಲ್ಲ ಕೆಲಸ ಕಾರ್ಯಗಳು ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಇದೆ ವೇಳೆ ತಿಳಿಸಿದರು.  

ಕರ್ನಾಟಕ ರಾಜ್ಯದ ಮುಕುಟವಾದ ಬೀದರ್ ಜಿಲ್ಲೆ ಆಂದ್ರಪ್ರದೇಶ, ಮಹಾರಾಷ್ಟ್ರದೊಂದಿಗೆ ಭೌಗೋಳಿಕ ಗಡಿಯನ್ನು ಹಂಚಿಕೊಂಡಿದೆ. ಬಹಮನಿ ಸುಲ್ತಾನರ ಆಳ್ವಿಕೆ, ಶರಣರ ಸಾಮಾಜಿಕ ಕ್ರಾಂತಿಯನ್ನು ಕಂಡಿದೆ. ಮರಾಠಿ, ಹಿಂದಿ, ಉರ್ದು ಭಾಷೆಗಳ ಪ್ರಭಾವದಲ್ಲಿಯೂ ಕನ್ನಡ ಭಾಷೆ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿದೆ.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಚನ್ನಬಸವ ಪಟ್ಟದೇವರು ನಾಡು, ನುಡಿಯ ಸಂರಕ್ಷಣೆಗೆ ನಿಂತವರು. ನಿಜಾಮರ ಆಡಳಿತದ ದೌರ್ಜನ್ಯ, ಮರಾಠಿ ಭಾಷೆಯ ಪ್ರಭಾವದ ನಡುವೆಯೂ ಕನ್ನಡದ ಸೊಲ್ಲು ಅಡಗದಂತೆ ಕಾಪಾಡಿದ ಶ್ರೇಯ ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಮಠಗಳೆಂದರೆ ಮತ, ಧರ್ಮಗಳ ಸಂರಕ್ಷಣೆ ಎಂಬ ಸಿದ್ಧ ನಂಬಿಕೆಗಳನ್ನು ಮುರಿದು ಕನ್ನಡ ಉಳಿದಾಗ ಮಾತ್ರ ಧರ್ಮ ಉಳಿಯುತ್ತದೆ ಎಂದು ಶ್ರೀಗಳು ಬಲವಾಗಿ ಪ್ರತಿಪಾದಿಸಿದ್ದರು. ಅವರು ಕನ್ನಡವನ್ನು ಕೇವಲ ಭಾಷೆಯಾಗಿ ಕಾಣಲಿಲ್ಲ. ಅದನ್ನು ನಮ್ಮ ಸಂಸ್ಕೃತಿ, ಒಟ್ಟು ಜೀವನ ವಿಧಾನ ಎಂದು ನಂಬಿದ್ದರು. ಇಂತಹ ಮಹನೀಯ ಶರಣರ ಹೆಸರನ್ನು ರಂಗಮಂದಿರಕ್ಕೆ ಇಟ್ಟಿರುವುದು ಅತ್ಯಂತ ಔಚಿತ್ಯವೆಂದು ನಂಬಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಬಸವಲಿಂಗ ಪಟ್ಟದೇವರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ, ಲೋಕಸಭಾ ಸದಸ್ಯ ಭಗವಂತ ಖೂಬಾ, ವಿಧಾನಸಭೆ ಸದಸ್ಯರಾದ ರಹೀಂ ಖಾನ್, ಈಶ್ವರ.ಬಿ.ಖಂಡ್ರೆ, ರಾಜಶೇಖರ.ಬಿ.ಪಾಟೀಲ, ಬಂಡೆಪ್ಪ ಖಾಶೆಂಪೂರ, ಬಿ.ನಾರಾಯಣರಾವ್, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ, ವಿಜಯಸಿಂಗ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News