ಶಾಹೀನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ವಿಚಾರಣೆ ನಿಲ್ಲಿಸಿ: ಪೊಲೀಸರಿಗೆ ಮಕ್ಕಳ ಹಕ್ಕುಗಳ ಆಯೋಗದ ಸೂಚನೆ

Update: 2020-02-08 09:25 GMT

ಬೆಂಗಳೂರು:  ಪೌರತ್ವ ಕಾಯಿದೆ ವಿರೋಧಿ ನಾಟಕ ಪ್ರದರ್ಶಿಸಿದ ಬೀದರ್‍ ನ ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧ ದಾಖಲಿಸಲಾಗಿರುವ ದೇಶದ್ರೋಹ ಪ್ರಕರಣ,  ಒಂಬತ್ತು ವರ್ಷದ ವಿದ್ಯಾರ್ಥಿಯ ತಾಯಿಯ ಬಂಧನ  ಹಾಗೂ ವಿದ್ಯಾರ್ಥಿಗಳ ಪೊಲೀಸ್ ವಿಚಾರಣೆ ಕುರಿತಂತೆ ರಾಜ್ಯದ ಮಕ್ಕಳ ಹಕ್ಕುಗಳ ಆಯೋಗ ಜಿಲ್ಲಾ ಪೊಲೀಸರನ್ನು ಬಾಲ ನ್ಯಾಯ ಕಾಯಿದೆ ಸಹಿತ ಹಲವಾರು ಉಲ್ಲಂಘನೆಗಳಿಗೆ ಸಂಬಂಧಿಸಿ ತರಾಟೆಗೆ  ತೆಗೆದುಕೊಂಡಿದೆ.

ಬೀದರ್ ಎಸ್ಪಿ, ಜಿಲ್ಲಾಧಿಕಾರಿ ಸಹಿತ ಹಲವು ಅಧಿಕಾರಿಗಳಿಗೆ ಪತ್ರ ಬರೆದಿರುವ ರಾಜ್ಯ  ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಡಾ. ಆ್ಯಂಟನಿ ಸೆಬಾಸ್ಟಿಯನ್  ಪೊಲೀಸ್ ವಿಚಾರಣೆಯಿಂದ ಶಾಲೆಯಲ್ಲಿ `ಭೀತಿಯ ವಾತಾವರಣ' ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ. ಶಾಲಾ ಮಕ್ಕಳ ವಿಚಾರಣೆ ನಡೆಸುವುದನ್ನು ನಿಲ್ಲಿಸುವಂತೆಯೂ ಆಯೋಗ ಪೊಲೀಸರಿಗೆ ಸೂಚಿಸಿದೆ.

ಜನವರಿ 30ರಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಜತೆಗೆ ಬಂಧಿಸಲ್ಪಟ್ಟ ಮಹಿಳೆಯ ಒಂಬತ್ತು ವರ್ಷದ ವಿದ್ಯಾರ್ಥಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡದೆ ಆತನ ನೆರೆಮನೆಯವರ ಬಳಿ ಒಪ್ಪಿಸಿದ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ ಎಂದು ಆಯೋಗ ಹೇಳಿದೆ.

ಮಕ್ಕಳ ಹಕ್ಕುಗಳ ತಜ್ಞೆ ಡಾ. ಜಯಶ್ರೀ ಅವರ ನೇತೃತ್ವದಲ್ಲಿ ಆಯೋಗದ ದ್ವಿಸದಸ್ಯ ಸಮಿತಿ  ನಡೆಸಿದ ತನಿಖೆಯ ನಂತರ ಆಯೋಗದ ಅಧ್ಯಕ್ಷರು ಗುರುವಾರ ಪತ್ರ ಬರೆದಿದ್ದಾರೆ.

"ಸಮಿತಿಯು ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕರು, ಪೊಲೀಸರಿಂದ ಮಾಹಿತಿ ಸಂಗ್ರಹಿಸಿ,  ವಿವಿಧ ಫೋಟೋಗಳು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಪೊಲೀಸರು ಮಕ್ಕಳ ಹಕ್ಕುಗಳನ್ನು ಶಾಲೆಯಲ್ಲಿ ಉಲ್ಲಂಘಿಸಿದ್ದಾರೆಂದು ತನಿಖೆಯಿಂದ ತಿಳಿದು ಬಂದಿದೆ'' ಎಂದು ಸೆಬಾಸ್ಟಿಯನ್ ಹೇಳಿದ್ದಾರೆ.

``ಶಾಲೆಯಲ್ಲಿ ಮಕ್ಕಳನ್ನು ವಿಚಾರಣೆ ನಡೆಸಿದ ಸಂದರ್ಭ ಕೆಲ ಪೊಲೀಸರು ಸಮವಸ್ತ್ರದಲ್ಲಿದ್ದರೆ ಇನ್ನು ಕೆಲವರು ಸಾಮಾನ್ಯ ಉಡುಪಿನಲ್ಲಿದ್ದರು, ಮಕ್ಕಳ ವಿಚಾರಣೆ ನಡೆಸಿದಾಗ  ಅವರ ಹೆತ್ತವರು ಯಾ ಪೋಷಕರು ಕೂಡ ಇರಬೇಕಿತ್ತು'' ಎಂದು ಸೆಬಾಸ್ಟಿಯನ್ ತಿಳಿಸಿದ್ದಾರೆ.

ಜನವರಿ 21ರಂದು ಶಾಲೆಯ ವಾರ್ಷಿಕೋತ್ಸವದ ವೇಳೆ ಪ್ರದರ್ಶನಗೊಂಡ ನಾಟಕದ ಕುರಿತಂತೆ ದಾಖಲಾದ ದೇಶದ್ರೋಹ ಪ್ರಕರಣ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆ ಆರಂಭಗೊಂಡಂದಿನಿಂದ  ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿರುವುದನ್ನು ಆಯೋಗ  ತಿಳಿದುಕೊಂಡಿದೆ.

ತಾಯಿ ನಜೀಬುನ್ನೀಸಾರ ಬಂಧನದ ನಂತರ  ಒಂಬತ್ತು ವರ್ಷದ ವಿದ್ಯಾರ್ಥಿ ಎದುರಿಸುತ್ತಿರುವ ಸಮಸ್ಯೆಯನ್ನು ಆಕೆಯ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದ ಗಮನಕ್ಕೆ ತರಬೇಕೆಂದು ಆಯೋಗ ಬೀದರ್ ಪೊಲೀಸರಿಗೆ ಸೂಚಿಸಿದೆ.

ಸ್ಥಳೀಯ ಎಬಿವಿಪಿ ಕಾರ್ಯಕರ್ತ ನೀಲೇಶ್ ದಾಖಲಿಸಿದ್ದ ದೂರಿನ ಆಧಾರದಲ್ಲಿ ಮುಖ್ಯೋಪಾಧ್ಯಾಯಿನಿ ಫರೀದಾ ಬೇಗಂ ಹಾಗೂ ವಿದ್ಯಾರ್ಥಿಯ ತಾಯಿಯನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News