ಶಾಹೀನ್ ಶಾಲೆ ವಿರುದ್ಧದ ದೇಶದ್ರೋಹ ಪ್ರಕರಣ ಹಿಂಪಡೆಯಬೇಕು: ಸಿಎಂ ಭೇಟಿ ಮಾಡಿ ಕಾಂಗ್ರೆಸ್ ನಿಯೋಗ ಮನವಿ
ಬೀದರ್, ಫೆ.8: ಶಾಹೀನ್ ಶಿಕ್ಷಣ ಸಂಸ್ಥೆಯ ಮೇಲೆ ಹೂಡಿರುವ ದೇಶದ್ರೋಹ ಪ್ರಕರಣ ಹಿಂಪಡೆದು ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬೀದರ್ ಜಿಲ್ಲೆಯ ಕಾಂಗ್ರೆಸ್ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.
ಪ್ರತಿಷ್ಠಿತ ಶಾಹೀನ್ ಶಾಲೆಯಲ್ಲಿ ಕಳೆದ ಜನವರಿ 21ರಂದು ಮಕ್ಕಳು ಪ್ರದರ್ಶಿಸಿದ ಸಿಎಎ ವಿರೋಧಿ ನಾಟಕದಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಲಾಗಿದೆ ಎನ್ನುವ ದೂರಿನ ಹಿನ್ನಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಮತ್ತು ವಿದ್ಯಾರ್ಥಿಯ ತಾಯಿಯನ್ನು ಬಂಧಿಸಿರುವುದು ವಿಷಾದದ ಸಂಗತಿ. ಹಿಂದುಳಿದ ಬೀದರ್ ಜಿಲ್ಲೆಯಲ್ಲಿ ಕಳೆದ ಹತ್ತಾರೂ ವರ್ಷಗಳಿಂದ ಶಾಹೀನ್ ಶಿಕ್ಷಣ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಶಾಹೀನ್ ಶಿಕ್ಷಣ ಸಂಸ್ಥೆ ಈ ಭಾಗಕ್ಕೆ ವಿಶಿಷ್ಠ ಕೊಡುಗೆ ನೀಡುವ ಪ್ರಯತ್ನ ಮಾಡುತ್ತಿದೆ. ಆದರೆ ಒಂದು ಸಣ್ಣ ವಿಷಯವನ್ನು ಮುಂದಿಟ್ಟುಕೊಂಡು ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ವಿದ್ಯಾರ್ಥಿಯ ತಾಯಿಯನ್ನು ಬಂಧಿಸಿ ಜೈಲಿಗೆಟ್ಟಿರುವುದು ಸರಿಯಲ್ಲ ಎಂದು ನಿಯೋಗ ತಿಳಿಸಿದೆ
ವಿದ್ಯಾರ್ಥಿನಿಯ ತಾಯಿಯನ್ನು ಬಂಧಿಸಿರುವುದರಿಂದ ಏನೂ ಆರಿಯದ ಆ ವಿದ್ಯಾರ್ಥಿನಿ ಆನಾಥಳಾಗಿದ್ದಾಳೆ. ಅದಲ್ಲದೇ ವಿದ್ಯಾರ್ಥಿಗಳು ಅಭ್ಯಾಸ ಮಾಡುವ ತರಗತಿಗಳಿಗೆ ಪೊಲೀಸರು ಹೋಗಿ ಪದೇ ಪದೇ ವಿದ್ಯಾರ್ಥಿಗಳನ್ನು ಪ್ರಶ್ನಿಸುವುದರಿಂದ ಅವರು ಭಯಭೀತರಾಗಿದ್ದಾರೆ. ಆದ್ದರಿಂದ ಶಿಕ್ಷಣ ಸಂಸ್ಥೆಯ ಮೇಲೆ ಹಾಕಲಾದ ದೇಶದ್ರೋಹ ಪ್ರಕರಣ ಹಿಂಪಡೆದು ಬಂಧಿತ ಶಾಲಾ ಮುಖ್ಯಶಿಕ್ಷಕ ಹಾಗೂ 4ನೇ ತರಗತಿಯ ವಿದ್ಯಾರ್ಥಿಯ ತಾಯಿಯನ್ನು ಬಿಡುಗಡೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ನಿಯೋಗದಲ್ಲಿ ಶಾಸಕರಾದ ಈಶ್ವರ ಬಿ.ಖಂಡ್ರೆ, ರಾಜಶೇಖರ ಬಿ. ಪಾಟೀಲ್, ರಹೀಮ್ ಖಾನ್, ಬಿ.ನಾರಾಯಣರಾವ್, ವಿಧಾನ ಪರಿಷತ್ ಸದಸ್ಯರಾದ ವಿಜಯ ಸಿಂಗ್, ಅರವಿಂದ ಕುಮಾರ್ ಅರಳಿ, ಚಂದ್ರಶೇಖರ ಬಿ.ಪಾಟೀಲ್ ಹಾಗೂ ಬೀದರ್ ಜಿ.ಪಂ ಅಧ್ಯಕ್ಷೆ ಗೀತಾ ಪಂಡಿತ ಚಿದ್ರ ಇದ್ದರು.