ಫೆ.13ರ ಕರ್ನಾಟಕ ಬಂದ್ ಕರೆಗೆ ರಾಜ್ಯ ಮಹಿಳಾ ಒಕ್ಕೂಟ ಬೆಂಬಲ
ಬೆಂಗಳೂರು, ಫೆ.8: ಕನ್ನಡಿಗರ ಉದ್ಯೋಗಕ್ಕೆ ಸಂಬಂಧಿಸಿದ ರೂಪಗೊಂಡಿರುವ ಸರೋಜಿನಿ ಮಹಿಷಿ ವರಿದಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಫೆ.13 ರಂದು ಕರ್ನಾಟಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕರ್ನಾಟಕ ರಾಜ್ಯ ಮಹಿಳಾ ಒಕ್ಕೂಟ ಬೆಂಬಲ ಸೂಚಿಸಿದೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಮಾತನಾಡಿ, ಕನ್ನಡ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಮಕ್ಕಳಿಗೆ ಉದ್ಯೋಗ ಸಿಗುತ್ತಿಲ್ಲ. ನಮ್ಮ ಕನ್ನಡದ ಯುವಜನತೆ ಕರ್ನಾಟಕದಲ್ಲಿ ತಬ್ಬಲಿಗಳಾಗಿದ್ದಾರೆ. ಇದೆಲ್ಲವಕ್ಕೂ ಪರಿಹಾರ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವುದೇ ಆಗಿದೆ ಎಂದು ತಿಳಿಸಿದರು.
ಸರೋಜಿನಿ ಮಹಿಷಿ ವರದಿ ಸಿದ್ದಗೊಂಡು ಹಲವು ದಶಕಗಳೇ ಕಳೆದಿವೆ. ಆದರೆ, ನಮ್ಮ ಸರಕಾರಗಳು ಈ ವರದಿಯನ್ನು ಜಾರಿ ಮಾಡುವಲ್ಲಿ ಮೀನಾಮೇಷ ಎಣಿಸುತ್ತಲೆ ಬಂದಿವೆ. ವರದಿ ಜಾರಿಗೊಳಿಸದಿರಲು ಜನಪ್ರತಿನಿಧಿಗಳಿಗಿರುವ ಸ್ವಹಿತಾಸಕ್ತಿಯೇನು ಎಂಬುದನ್ನು ಬಹಿರಂಗ ಪಡಿಸಬೇಕೆಂದು ಅವರು ಒತ್ತಾಯಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಇಲ್ಲಿಯವರೆಗೂ ಸರೋಜಿನಿ ಮಹಿಷಿ ವರದಿ ಪರಿಷ್ಕೃತ ಹಲವು ವರದಿಗಳನ್ನು ರಾಜ್ಯ ಸರಕಾರಕ್ಕೆ ಸಲ್ಲಿಸುತ್ತಾ ಬರಲಾಗಿದೆ. ಎಲ್ಲ ಪಕ್ಷಗಳ ರಾಜ್ಯ ಸರಕಾರಗಳು ಕೇವಲ ವರದಿಯನ್ನು ತರಿಸಿಕೊಂಡು, ಜಾರಿಗೊಳಿಸುತ್ತೇವೆಂಬ ತೋರಿಕೆಯ ಉತ್ತರವನ್ನು ನೀಡುತ್ತಿವೆ. ಆದರೆ, ಕನ್ನಡ ಯುವಜನತೆಯ ಹಿತಾಸಕ್ತಿಗೆ ಪೂರಕವಾಗಿ ಯಾವ ಸರಕಾರಗಳು ಸ್ಪಂದಿಸುತ್ತಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಬಂದ್‌ಗೆ ನಗರದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ನಗರದ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ನಡೆಯಲಿದೆ. ಈ ಬಂದ್‌ಗೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಬಿಎಂಟಿಸಿ, ಆಟೋ ಚಾಲಕರು ಮತ್ತು ಓಲಾ ಉಬರ್ ಚಾಲಕರ ಸಂಘಟನೆಗಳು ಬೆಂಬಲ ಸೂಚಿಸಿವೆ. ಜೊತೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕ ರಜೆ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದು ಹೇಳಿದರು.