ಸಿಎಎ ಮುಸ್ಲಿಮರ ಸಮಸ್ಯೆ ಮಾತ್ರವಲ್ಲ, ದೇಶದ ಸಮಸ್ಯೆ: ಎಚ್.ಡಿ ದೇವೇಗೌಡ

Update: 2020-02-08 12:57 GMT

ಹಾಸನ, ಫೆ.8: ಸಿಎಎಯಿಂದ ಮುಸ್ಲಿಮರನ್ನು ಹೊರಗೆ ಇಟ್ಟಿರುವುದರಲ್ಲಿ ತಂತ್ರಗಾರಿಗೆ ಇದೆ. ದೇಶದ ಜನರನ್ನು ಇಬ್ಬಾಗ ಮಾಡಲಾಗುತ್ತಿದೆ. ಪೌರತ್ವ ಕಾಯ್ದೆ ಮುಸ್ಲಿಮರ ಸಮಸ್ಯೆ ಮಾತ್ರವಲ್ಲ, ಇದು ದೇಶದ ಸಮಸ್ಯೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ಸಂಘಟನೆಯ ಆಶ್ರಯದಲ್ಲಿ ಕೇಂದ್ರ ಸರಕಾರದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ನಗರದ ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆ, ಹೊಸ ಈದ್ಗಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ದೇವೇಗೌಡ ಅವರು, ಅಂದು ಇಂದಿರಾ ಗಾಂದಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಆ ತುರ್ತು ಪರಿಸ್ಥಿತಿ ಪಾರ್ಲಿಮೆಂಟ್ ಒಳಗೆ ಇರಲಿಲ್ಲ. ಇಂದು ಮೋದಿ ಆಡಳಿತದಲ್ಲಿ ಪಾರ್ಲಿಮೆಂಟ್ ಒಳಗೂ ತುರ್ತು ಪರಿಸ್ಥಿತಿ ಹೇರಲಾಗಿದೆ. ಜನ ಪ್ರತಿನಿಧಿಗಳಿಗೆ ಮಾತನಾಡಲು ಬಿಡುತ್ತಿಲ್ಲ. ಸಿಎಎಗೆ ರಾಜ್ಯಸಭೆಯಲ್ಲಿ ಬಹುಮತವಿರಲಿಲ್ಲ. ಆದರೆ ಹೇಗೆ ಬಹುಮತ ಪಡೆದರು ಎಂಬುದನ್ನು ದೇಶದ ಜನತೆ ತಿಳಿದುಕೊಳ್ಳಬೇಕಾಗಿದೆ. ಪ್ರಾದೇಶಿಕ ಪಕ್ಷಗಳನ್ನು ತನ್ನದೇ ದಾಟಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ದೇಶವನ್ನು ಹಿಂದೂ ರಾಷ್ಟ್ರ ಮಾಡುವುದು ಸುಲಭ ಸಾಧ್ಯವಲ್ಲ. ಈ ದೇಶದ ಜನ ಇದಕ್ಕೆ ಅವಕಾಶ ನೀಡುವುದಿಲ್ಲ. ಗಾಂಧಿ ಹತ್ಯೆಗೆ ಕಾರಣರಾದವರಿಗೆ ಭಾರತ ರತ್ನ ನೀಡಿ ಎಂದು ಒತ್ತಾಯಿಸುತ್ತಾರೆ. ಗಾಂಧಿಯ ಬಗ್ಗೆ ಮಾತನಾಡುವುದನ್ನು ಕೇಳಿದರೆ ಕರುಳು ಕತ್ತರಿಸಿದಂತಾಗುತ್ತದೆ ಎಂದು ಹೇಳಿದರು.

ನಾವು ರಾಷ್ಟ್ರದಲ್ಲಿ ರಾಜಕೀಯ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಕೇವಲ ಭಾಷಣದಿಂದ ಎಲ್ಲವೂ ಸಾಧ್ಯವಿಲ್ಲ. ಜಾತ್ಯತೀತ ಪಕ್ಷಗಳು ಒಂದಾಗಬೇಕು. ಅಯಾ ರಾಜ್ಯಗಳಲ್ಲಿ ಅವರ ಶಕ್ತಿಯ ಅನುಗುಣವಾಗಿ ಕೆಲಸ ಮಾಡಿದರೆ ಮುಂದಿನ ಅನಾಹುತ ತಡೆಯಬಹುದು. ಸುಪ್ರೀಂ ಕೋರ್ಟ್ ಸಹ ಸ್ವಲ್ಪ ಮಟ್ಟಿಗೆ ಶಕ್ತಿ ಕಳೆದುಕೊಂಡಿದೆ ಎಂಬ ಭಯ ಕಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ರಕ್ಷಿಸುವವರು ಯಾರು ಎಂಬ ಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಖ್ಯಾತ ವಕೀಲ ಎಸ್.ಬಾಲಕೃಷ್ಣ ನ್ ಮಾತನಾಡಿ, ದೇಶದಲ್ಲಿ ಸರ್ವಾಧಿಕಾರ ಆಡಳಿತ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಈ ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ನಡೆಯು ಸರ್ವಾಧಿಕಾರದ ಕಡೆ ನಡೆಯುತ್ತಿದೆ. ಅನೇಕ ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡಲಾಗುತ್ತಿದೆ. ಪೌರತ್ವ ಕಾನೂನು ಹಿಟ್ಲರ್ ನ ಆಡಳಿತದ ಪ್ರಥಮ ನಡೆಯಾಗಿದೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News