ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಿಎಎ, ಎನ್‌ಆರ್‌ಸಿ ವಿರೋಧಿಸಬೇಕಿದೆ: ಸಸಿಕಾಂತ್ ಸೆಂಥಿಲ್

Update: 2020-02-08 13:36 GMT

ಮೈಸೂರು, ಫೆ.8: ನಮ್ಮನ್ನು ಆಳುತ್ತಿರುವವರಿಗೆ ದೇಶ ನಡೆಸುವ ಬುದ್ಧಿಗಿಂತ, ದೇಶ ಒಡೆಯುವ ಬುದ್ಧಿ ಇದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ನಗರದ ಪುರಭವನದಲ್ಲಿ ಶನಿವಾರ ಕನ್ಸರ್ನ್ಡ್ ಸಿಟಿಜನ್ಸ್ ಆಫ್ ಇಂಡಿಯಾ (ಸಿಪಿಐ) ಮೈಸೂರು, ವತಿಯಿಂದ ಹಮ್ಮಿಕೊಂಡಿದ್ದ 'ಶೋಷಿತ ಜನಗಳ ಸಮಾವೇಶ'ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಜಾರಿಯಾಗಿ 70 ವರ್ಷಗಳು ಕಳೆದಿವೆ. ಇಲ್ಲಿವರೆಗೂ ಆರಾಮವಾಗಿದ್ದ ನಾವು ಇನ್ನು ಮುಂದೆ ಆರಾಮಾಗಿ ಇರಬಾರದು. ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾವು ಸಿಎಎ, ಎನ್‌ಆರ್‌ಸಿ ಮತ್ತು ಎನ್‍ಪಿಆರ್ ಅನ್ನು ವಿರೋಧಿಸಬೇಕಿದೆ ಎಂದು ಹೇಳಿದರು.

ನಮ್ಮನ್ನು ಆಳುತ್ತಿರುವವರಿಗೆ ದೇಶ ಮುನ್ನಡೆಸುವುದಕ್ಕಿಂತ ದೇಶ ಒಡೆಯುವ ಬುದ್ಧಿ ಇದೆ. ಸಮಾಜದಲ್ಲಿ ಯಾರೂ ಒಂದಾಗಬಾರದು ಎಂಬ ಉದ್ದೇಶದಿಂದ ಸಿಎಎ, ಎನ್‌ಆರ್‌ಸಿ ಜಾರಿ ಮಾಡಿ ಧರ್ಮ ಧರ್ಮಗಳ ನಡುವೆ ಕೆಡುಕು ಉಂಟು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಬ್ಬನೇ ಒಬ್ಬ ಬಡವ ಡಿಟೆನ್ಷನ್ ಸೆಂಟರ್ ಪಾಲಾದರೂ ನಾವು ಇರುವುದೂ ವ್ಯರ್ಥ ಎಂದ ಅವರು, ನುಸುಳುಕೋರರ ಹೆಸರಲ್ಲಿ ಎಲ್ಲರನ್ನೂ ಪರಿಶೀಲಿಸುವುದಲ್ಲ. ನಾಲ್ಕು ಜನ ಕಳ್ಳತನ ಮಾಡಿದ್ದಾರೆಂದು ಎಲ್ಲರ ಮನೆಗೂ ನುಗ್ಗುವುದು ಸರಿಯೇ? ನುಸುಳುಕೋರರೆಂದು ಕರೆಸಿಕೊಳ್ಳುತ್ತಿರುವವರಲ್ಲಿ ಬಹುತೇಕರು ಕಡು ಬಡವರು. ನೈತಿಕವಾಗಿ ನೋಡುವುದಾದರೆ ಅಂಥವರಿಗೆ ತೊಂದರೆ ಕೊಡುವುದೂ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ದೇಶದ ತುಂಬಾ ಡಿಟೆನ್ಷನ್ ಸೆಂಟರ್ ಗಳನ್ನು ಕಟ್ಟಲಾಗುತ್ತಿದೆ. ದಾಖಲೆ ಇಲ್ಲ ಎಂದ ಮಾತ್ರಕ್ಕೆ ಆ ಕೇಂದ್ರಗಳಿಗೆ ಬಡವರನ್ನು ತುಂಬಲಾಗುತ್ತದೆ. ಅಂತಹ ದಿನಗಳು ಬರಬಾರದು ಎಂದ ಅವರು, 100 ಜನರಲ್ಲಿ 20 ಜನರನ್ನು ಶತ್ರುಗಳನ್ನಾಗಿ ಬಿಂಬಿಸಿ, ಇನ್ನುಳಿದ 80 ಜನರ ಪರವಾಗಿ ನಾವು ಹೋರಾಡುತ್ತಿದ್ದೇವೆ ಎಂದು ಬಿಂಬಿಸಿ ಜನರನ್ನು ಒಡೆಯಲಾಗುತ್ತದೆ. ಹೀಗಾಗಿ ಘರ್ ವಾಪಸಿ, ಗೋ ಮಾಂಸ, ಹಿಂದೂರಾಷ್ಟ್ರ ಎಂಬ ವಿಚಾರಗಳು ಮುನ್ನೆಲೆಗೆ ಬರುತ್ತವೆ ಎಂದು ಎಚ್ಚರಿಸಿದರು.

ದಲಿತ ಸಮುದಾಯದವರು ಶರ್ಟ್- ಪ್ಯಾಂಟ್ ಹಾಕುವ ಅವಕಾಶವನ್ನು ಒದಗಿಸಿದ್ದು ಸಂವಿಧಾನ. ಹಿಂದೂರಾಷ್ಟ್ರ ನಿರ್ಮಾಣವೆಂದರೆ ದಲಿತರ ಶರ್ಟ್ ಮತ್ತು ಪ್ಯಾಂಟ್ ಕಿತ್ತುಕೊಂಡು ಈ ಹಿಂದೆ ಇದ್ದ ವ್ಯವಸ್ಥೆಯನ್ನು ಜಾರಿಗೆ ತರುವುದೇ ಆಗಿದೆ. ಹಿಂದೂ ರಾಷ್ಟ್ರವೆಂದರೆ ಜಾತಿಗಳ ಒಕ್ಕೂಟ ಎಂದು ವಿಶ್ಲೇಷಿಸಿದರು.

ಸಿಎಎ ಕುರಿತು ಮಾತನಾಡಿದಷ್ಟೂ ಅದು ಮುಸ್ಲಿಮರ ಸಮಸ್ಯೆ ಎಂಬಂತಾಗಿದೆ. ಸಿಎಎ ಬಿಟ್ಟುಬಿಡಿ. ಎನ್‍ಪಿಆರ್, ಎನ್‌ಆರ್‌ಸಿಯಿಂದ ಸಾರ್ವಜನಿಕರ ಮೇಲೆ ಆಗುವ ಭೀಕರ ದಾಳಿ ಮತ್ತೊಂದಿಲ್ಲ. ಎ.1 ರಿಂದ ಮನೆ ಮನೆಗೆ ಬರುತ್ತಾರೆ. ಪೌರತ್ವ ಪರಿಶೀಲನೆ ಮಾಡುತ್ತಾರೆ. ದಾಖಲೆ ನೀಡಬೇಡಿ ಎಂದು ಹೇಳಿದರು.

ಸರ್ಕಾರ ಈ ಕಾನೂನುಗಳನ್ನು ನಮ್ಮ ಒಳಿತಿಗಾಗಿ ಮಾಡುತ್ತಿದೆ ಎಂಬ ನಂಬಿಕೆ 2014ಕ್ಕೆ ಸತ್ತು ಹೋಗಿದೆ. ಎನ್‍ಪಿಆರ್ ಮೂಲಕ ಎನ್‌ಆರ್‌ಸಿ ಮಾಡಲಾಗುತ್ತದೆ. ನಿಮ್ಮ ದಾಖಲೆ ತೆಗೆದುಕೊಂಡು ಹೋಗಿ ಕಚೇರಿಯಲ್ಲಿ ನಿಮ್ಮ ಪೌರತ್ವನ್ನು ಪರಿಶೀಲಿಸುತ್ತಾರೆ ಎಂದು ತಿಳಿಸಿದರು.

ವಿಚಾರ ಸಂಕಿರಣದಲ್ಲಿ ನಿವೃತ್ತ ಪ್ರಾಂಶುಪಾಲರಾದ ವಿದ್ಯಾ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಡಾ.ಚಂದ್ರ ಪೂಜಾರಿ, ಸಾಫ್ಟ್ ವೇರ್ ತಂತ್ರಜ್ಞ ಕೆ.ಜಿ.ಸತೀಶ್, ಆಹಾರ ತಜ್ಞ ಕೆ.ಸಿ.ರಘು, ಸಿಪಿಐ ರಾಜ್ಯ ಸಂಚಾಲಕ ಬಿ.ರವಿ ಉಪಸ್ಥಿತರಿದ್ದರು.

ದೇಶ, ದೇಶ ಎಂಬ ವಿಷವನ್ನು ಕೆಲವರಿಗೆ ಬಿತ್ತಲಾಗಿದೆ. ಅವರನ್ನು ಅದರಿಂದ ಹೊರತಂದು ನಮ್ಮೊಂದಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ.
-ಸಸಿಕಾಂತ್ ಸೆಂಥಿಲ್, ಮಾಜಿ ಐಎಎಸ್ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News