ಹೈಕಮಾಂಡ್‌ಗೆ ಹೆದರಿ ರಾಜ್ಯದ ಶಾಸಕರು, ಮುಖ್ಯಮಂತ್ರಿ ಮೌನವಾಗಿದ್ದಾರೆ: ಡಿಕೆಶಿ ವಾಗ್ದಾಳಿ

Update: 2020-02-08 14:24 GMT

ಬೆಂಗಳೂರು, ಫೆ.8: ರಾಜ್ಯದ ವಿಚಾರದಲ್ಲಿ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೈಕಮಾಂಡ್ ಮೇಲಿರುವ ಭಯದಿಂದ ಬಿಜೆಪಿ ನಾಯಕರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮೌನವಾಗಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಶನಿವಾರ ಸದಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘2020ರ ಬಜೆಟ್ ಐತಿಹಾಸಿಕ ಬಜೆಟ್ ಆಗಲಿದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಆ ನಿರೀಕ್ಷೆ ಸುಳ್ಳಾಗಿದ್ದು, ಕೇಂದ್ರ ಸರಕಾರ ಅತ್ಯಂತ ಕೆಟ್ಟ ಬಜೆಟ್ ಮಂಡಿಸಿದೆ’ ಎಂದರು. ಆರ್ಥಿಕ ಮುಗ್ಗಟ್ಟು ಎದುರಾಗಿರುವ ಸಂದರ್ಭದಲ್ಲಿ ಹೊರ ದೇಶದಿಂದ ಬಂಡವಾಳ ಬರುವುದಿರಲಿ, ಇಲ್ಲಿನ ಮಧ್ಯಮ ಕೈಗಾರಿಕೆಗಳಿಗಾದರೂ ಉತ್ತೇಜನ ನೀಡಬೇಕಿತ್ತು. ಜನರು ಕೇಂದ್ರ ಸರಕಾರಕ್ಕೆ ಬಹುಮತ ಕೊಟ್ಟ ನಂತರ ಅವರು ಮಾಡಿರುವ ತಿದ್ದುಪಡಿಯಿಂದ ಬ್ಯಾಂಕ್‌ಗಳಲ್ಲಿ ಅಧಿಕಾರಿಗಳು ಸಾಲ ನೀಡಲು ಇತರೆ ಪ್ರಮುಖ ನಿರ್ಧಾರ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಅವರು ಹೇಳಿದರು.

ಈ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿ ಮಾಡುವ ಕ್ರಮವೂ ಇಲ್ಲ, ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಅಂಶವೂ ಇಲ್ಲ. ಬಜೆಟ್ ಮಂಡನೆಯಾದ ದಿನ ಷೇರು ಮಾರುಕಟ್ಟೆಯಲ್ಲಿ 1 ಸಾವಿರ ಅಂಕಗಳು ಕುಸಿದಿದೆ ಅಂದರೆ ನಮ್ಮ ಜನರ ಆಸ್ತಿ ಮೌಲ್ಯ ಎಷ್ಟು ಕುಸಿದಿದೆ ಎಂಬುದನ್ನು ತೋರುತ್ತದೆ. ಇದೊಂದು ಅತ್ಯಂತ ಕೆಟ್ಟ ಹಾಗೂ ವೈಫಲ್ಯಕಾರಿ ಬಜೆಟ್ ಆಗಿದೆ ಎಂದು ಶಿವಕುಮಾರ್ ಟೀಕಿಸಿದರು.

ಯುವಕರಿಗೆ ಉದ್ಯೋಗ ನೀಡಿ ಎಂದು ರಾಹುಲ್ ಗಾಂಧಿ ಕೇಳುತ್ತಿದ್ದಾರೆ. ದೇಶದ ಮೇಲಿದ್ದ ಎಲ್ಲ ವಿಶ್ವಾಸ ಹಾಳಾಗಿದೆ. ಹೀಗಾಗಿ ಆರ್ಥಿಕ ಸ್ಥಿತಿ ಸುಧಾರಿಸಿ, ಜನರು ನಮ್ಮ ಭಾರತದ ಬಗ್ಗೆ ವಿಶ್ವಾಸ ಇಟ್ಟು ಬಂಡವಾಳ ಹಾಕುವಂತೆ ಮಾಡಿ. ಈ ವಿಚಾರಗಳ ಬಗ್ಗೆ ಬಿಜೆಪಿ ಶಾಸಕರು ಏನು ಮಾತನಾಡುವುದಿಲ್ಲ. ಶಾಲಾ ಮಕ್ಕಳಂತೆ ಮೌನವಾಗಿದ್ದಾರೆ. ಬೇರೆ ವಿಚಾರಗಳಾಗಿದ್ದರೆ ಬಹಳ ಗಟ್ಟಿಯಾಗಿ ಮಾತನಾಡುತ್ತಿದ್ದರು ಎಂದು ಅವರು ವ್ಯಂಗ್ಯವಾಡಿದರು.

ನಮ್ಮ ಮೈತ್ರಿ ಸರಕಾರ ಬಂದ ಮೊದಲ ದಿನವೆ ಯಡಿಯೂರಪ್ಪ, ರೈತರ ಸಾಲಮನ್ನಾ ವಿಚಾರವಾಗಿ ಎಷ್ಟು ಜೋರಾಗಿ ಮಾತನಾಡಿದ್ದರು, ಈಗ ಅವರ ಜೋಶ್ ಎಲ್ಲಿ ಹೋಯಿತು? ನಾವು ವಿರೋಧ ಪಕ್ಷ, ನಮ್ಮ ಜತೆ ಚರ್ಚೆ ಬೇಡ. ಅವರು ಅವರ ಪಕ್ಷದಲ್ಲೇ ಚರ್ಚೆ ಮಾಡಬಹುದಲ್ಲ ಎಂದು ಅವರು ಹೇಳಿದರು.

ಮಹಾದಾಯಿ ನೋಟಿಫಿಕೇಷನ್ ಹೊರಡಿಸಲು ಏನು ಬೇಕು? ಈ ರಾಜ್ಯದ ಜನ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಹೀಗಿದ್ದರೂ ಯಾಕೆ ನೋಟಿಫಿಕೇಶನ್ ಹೊರಡಿಸುತ್ತಿಲ್ಲ? ಗೋವಾದವರು ಆಕ್ಷೇಪ ಮಾಡುವುದು ಅವರ ಕರ್ತವ್ಯ. ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಸೇರಿದಂತೆ ಈ ಭಾಗದ ನಾಯಕರು ಏನು ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.

ನಮ್ಮ ರಾಜ್ಯದ ಹಿತಕ್ಕಾಗಿ ಕೋಲಾರ, ತುಮಕೂರು ಸೇರಿದಂತೆ ಅನೇಕ ಕಡೆಗಳಲ್ಲಿ ಯುಪಿಎ ಸರಕಾರದ ಆಡಳಿತದಲ್ಲಿ ಅನೇಕ ಯೋಜನೆಗಳನ್ನು ನೀಡಲಾಯಿತು. ಕೆ.ಎಚ್.ಮುನಿಯಪ್ಪ ಹೋರಾಟ ಮಾಡಿ ರೈಲ್ವೆ ಕೋಚ್ ತಯಾರಿಕಾ ಘಟಕ ಕೋಲಾರದಲ್ಲಿ ಮಾಡಲು ಅನುಮೋದನೆ ಕೊಡಿಸಿದ್ದರು ಎಂದು ಶಿವಕುಮಾರ್ ಹೇಳಿದರು.

ಆ ಯೋಜನೆಗೆ ಮೋದಿ ಸರಕಾರ ಹಣ ಕೊಟ್ಟು ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆ ಮೂಲಕ 25 ಸಂಸದರನ್ನು ಕೊಟ್ಟ ರಾಜ್ಯದ ಜನರ ಋಣ ತೀರಿಸುವ ಪರಿಜ್ಞಾನ ಇರಬೇಕಿತ್ತು. ಅದನ್ನು ಬಿಟ್ಟು ನಾವು ಮಾಡಿದ ಕೆಲಸಗಳನ್ನು ಬದಲಾವಣೆ ಮಾಡುವುದು ಸರಿಯಲ್ಲ. ಮುಂದೆ ವಿಧಾನಸಭಾ ಅಧಿವೇಶನ ಬರುತ್ತಿದ್ದು, ನಮ್ಮ ಶಾಸಕರೆಲ್ಲ ಸೇರಿ ಚರ್ಚೆ ಮಾಡಿ, ಕೇಂದ್ರ ಸರಕಾರದಿಂದ ಆಗುತ್ತಿರುವ ಮಲತಾಯಿ ಧೋರಣೆ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಒಂದು ರೀತಿ ಮಲತಾಯಿ ಧೋರಣೆ, ಈಗ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇನ್ನು ಹೆಚ್ಚಿನ ರೀತಿ ಮಲತಾಯಿ ಧೋರಣೆ ತಾಳಲಾಗಿದೆ. ಹೈಕಮಾಂಡ್‌ಗೆ ಹೆದರಿ ರಾಜ್ಯದ ಶಾಸಕರು, ಮುಖ್ಯಮಂತ್ರಿ ಧ್ವನಿ ಎತ್ತುತ್ತಿಲ್ಲ. ಹಾಗಂತ ನಾವು ಸುಮ್ಮನೆ ಕೂರಲು ಆಗುವುದಿಲ್ಲ. ನಾವು ಕೇವಲ ನಮ್ಮ ಶಾಸಕರ ಕ್ಷೇತ್ರ ಮಾತ್ರವಲ್ಲ ಅಖಂಡ ಕರ್ನಾಟಕದ ಹಿತ ಕಾಯಲು ಚರ್ಚಿಸಿ ವಿಧಾನಸಭಾ ಅಧಿವೇಶನದಲ್ಲಿ ಹೋರಾಡುತ್ತೇವೆ ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.

ನೀವು ಹೈ ವೋಲ್ಟೇಜ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಟ್ಯೂಬ್‌ಲೈಟ್ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರಮೋದಿಗೆ ತಿರುಗೇಟು ನೀಡಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ನಾವೇನೋ ಟ್ಯೂಬ್‌ಲೈಟ್, ನೀವು ಹೈ ವೋಲ್ಟೇಜ್ ಅಲ್ಲವೇ? ಹಾಗಿದ್ದರೆ, ಯುವಕರಿಗೆ ಉದ್ಯೋಗ ಕೊಡ್ರಪ್ಪಾ ನೋಡೋಣ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News