ಕೇಂದ್ರ ಸರ್ಕಾರಕ್ಕೆ 'ಶಾಹೀನ್' ಮೇಲೆ ಬಹಳ ವ್ಯಾಮೋಹ: ಸಸಿಕಾಂತ್ ಸೆಂಥಿಲ್

Update: 2020-02-08 16:46 GMT

ಮೈಸೂರು,ಫೆ.8: ಸರ್ಕಾರದ ಮೌಲ್ಯಗಳು ಬದಲಾದಾಗ ಮಾತ್ರ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಸಿಎಎ, ಎನ್‌ಆರ್‌ಸಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿವೆ. ಇಂತಹ ನಿರ್ಣಯ ಕೈಗೊಳ್ಳಲಾಗಿದೆ ಎಂದರೆ ಸರ್ಕಾರ ತನ್ನ ಮೌಲ್ಯವನ್ನು ಕಳೆದುಕೊಂಡಿದೆ ಎಂದರ್ಥ. ಹಾಗಾಗಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಬೀದರ್ ನ ಶಾಹೀನ್ ಶಾಲೆಯಲ್ಲಿ ಸಿಎಎ ವಿರೋಧಿಸಿ ಮಾಡಿದ್ದ ನಾಟಕ ಸಂಬಂಧ ದೇಶದ್ರೋಹ ಪ್ರಕರಣ ದಾಖಲಿಸಿ ಆ ಶಾಲೆಯ ವಿದ್ಯಾರ್ಥಿಯ ತಾಯಿ ಮತ್ತು ಶಿಕ್ಷಕಿಯ ಬಂಧನ ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಶಾಹೀನ್ ಶಾಲೆಯ ಮಗುವಿನ ತಾಯಿ ಮತ್ತು ಶಿಕ್ಷಕಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಸಿಕಾಂತ್ ಸೆಂಥಿಲ್, ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಅವರು ಏನನ್ನು ಮಾಡಬೇಡಿ ಎಂದು ಹೇಳುತ್ತಾರೊ ಅದನ್ನು ನಾವು ಮಾಡಬೇಕು. ಅವರು ಮಾಡಬೇಡಿ ಎಂದು ಹೇಳಿದ ತಕ್ಷಣ ಮಾಡದಿದ್ದರೆ ಅವರೇ ಕಿಂಗ್‍ ಗಳಾಗುತ್ತಾರೆ. ಅವರು ಮಾಡಬೇಡಿ ಎಂದದನ್ನು ಮಾಡಿದರೆ ನಾವುಗಳು ಕಿಂಗ್‍ ಗಳಾಗುತ್ತೇವೆ. ಹಾಗಾಗಿ ಅವರ ವಿರುದ್ಧ ನಾವು ದೊಡ್ಡ ದನಿಯಲ್ಲಿ ಮಾತನಾಡಬೇಕಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರಕ್ಕೆ 'ಶಾಹೀನ್' ಮೇಲೆ ಬಹಳ ವ್ಯಾಮೋಹ ಅನ್ನಿಸುತ್ತದೆ. ಅದಕ್ಕೆ ಶಾಹೀನ್ ಶಾಲೆಗಳು ಶೈನ್ ಆಗುತ್ತಿವೆ. ಒಬ್ಬ ಪುಟ್ಟ ಬಾಲಕ ಸರ್ಕಾರದ ವಿರುದ್ಧ ಒಂದು ನಾಟಕ ತಯಾರು ಮಾಡುತ್ತಾನೆ ಎಂದರೆ ಸರ್ಕಾರ ಯಾವ ಮಟ್ಟಕ್ಕೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಹಕ್ಕನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಸಂವಿಧಾನದಲ್ಲಿದೆ. ಆದರೆ ಅದಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡದೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.

ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್(ಜನ್ನಿ) ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ತಪ್ಪು ಮಾಡಿದರೆ ಎಲ್ಲರೂ ಪ್ರಶ್ನೆ ಮಾಡಬೇಕು. ಅಂತಹ ವ್ಯಕ್ತಿತ್ವವನ್ನು ಎಲ್ಲರೂ ರೂಪಿಸಿಕೊಳ್ಳಬೇಕು. ನಮಗೆ ಪ್ರಶ್ನೆ ಮಾಡುವ ವ್ಯಕ್ತಿತ್ವ ಮುಖ್ಯವೇ ಹೊರತು ಸರ್ಕಾರ ಮಾಡಿದ ನಿರ್ಧಾರಗಳಿಗೆ ತಲೆ ಆಡಿಸುವುದಲ್ಲ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.

ಸರ್ಕಾರದ ನಿರ್ಧಾರಗಳನ್ನು ಪ್ರಶ್ನೆ ಮಾಡಿದರೆ ದೇಶದ್ರೋಹದ ಪ್ರಕರಣ ದಾಖಲಿಸುತ್ತಾರೆ. ಹಾಗಾದರೆ ನಾವು ಇವರ ವಿರುದ್ಧ ಮಾತನಾಡಲೇ ಬಾರದೆ?. ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯ ನೀಡಿದ್ದಾರೆ. ಅದನ್ನು ಬಳಸಬಾರದು ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಪ್ರಗತಿಪರ ಚಿಂತಕ ಪ್ರೊ.ಶಬ್ಬೀರ್ ಮುಸ್ತಾಫ ಮಾತನಾಡಿ, 2014ರಿಂದೀಚೆಗೆ 233 ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಿದ್ದು, 1861ರ ಬ್ರಿಟಿಷ್ ಕಾನೂನಿನ ದುರ್ಬಳಕೆ ಈಗಲೂ ಆಗುತ್ತಿದೆ. ಇದು ದೇಶದಲ್ಲಿ ಯಾವ ರೀತಿಯ ಮನಸ್ಥಿತಿ ಕೆಲಸ ಮಾಡುತ್ತಿದೆ ಎಂಬುದನ್ನು ತೋರಿಸುತ್ತಿದೆ. ಬೀದರ್ ನ ಶಾಹೀನ್ ಶಾಲೆಯಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿಷಯಾಧಾರಿತ ನಾಟಕ ಪ್ರದರ್ಶಿಸಿದಕ್ಕೆ ದೇಶದ್ರೋಹದ ಪ್ರಕರಣ ದಾಖಲಿಸಿ ತಾಯಿ ಮತ್ತು ಶಿಕ್ಷಕಿಯ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವುದು ಸರಿಯಲ್ಲ. ಕೂಡಲೇ ಪ್ರಕರಣವನ್ನು ಹಿಂಪಡೆದು ತಾಯಿ ಮತ್ತು ಶಿಕ್ಷಕಿಯನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ವಕೀಲೆ ಆಸ್ಮಾ ಪರ್ವೀನ್ ಮಾತನಾಡಿ, ಶಾಹೀನ್ ಶಾಲೆಯ ಮಗುವೊಂದು ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ನಾಟಕ ಮಾಡಿದೆ ಎಂದಾಕ್ಷಣ ಮಗುವಿನ ತಾಯಿ ಮತ್ತು ಶಿಕ್ಷಕಿಯನ್ನು ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಹಾಗಾದರೆ ಮಂಗಳೂರಿನ ಕಲ್ಲಡ್ಕ ಪ್ರಭಾಕರ ಭಟ್ಟ ನಡೆಸುವ ಶಾಲೆಯಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ. ಹಾಗಿದ್ದರೆ ಅವರನ್ನೇಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಸಂವಿಧಾನ ರಕ್ಷಣಾ ಸಮಿತಿಯ ಕೆ.ಆರ್.ಗೋಪಾಲಕೃಷ್ಣ, ಸಿಪಿಐಎಂ ನ ಬಸವರಾಜು, ಚಂದ್ರಶೇಖರ ಮೇಟಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಕೆ.ಎಸ್.ಶಿವರಾಂ, ದಸಂಸ ಮೈಸೂರು ತಾಲೂಕು ಅಧ್ಯಕ್ಷ ಕಲ್ಲಹಳ್ಳಿಲ ಕುಮಾರ್, ವಕೀಲ ಪುನೀತ್, ಪ್ರಗತಿಪರ ಚಿಂತಕ ಪಂಡಿತಾರಾಧ್ಯ, ಜಿ.ಪಿ.ಬಸವರಾಜು, ಆನಂದ್, ಮುದ್ಧುಕೃಷ್ಣ, ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News