ಎ.26ರಂದು ಪ್ರಥಮ ಹಂತದ ಸಪ್ತಪದಿ ಉಚಿತ ಸಾಮೂಹಿಕ ವಿವಾಹ: ಸಚಿವ ಕೋಟ ಪೂಜಾರಿ

Update: 2020-02-08 17:28 GMT

ತುಮಕೂರು,ಫೆ.8: ಬಡವರು, ಜನ ಸಾಮಾನ್ಯರಿಗೆ ಸರಳ ವಿವಾಹವಾಗಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಮೂರು ದೇಗುಲಗಳಲ್ಲಿ ಎಪ್ರಿಲ್ 26ರಂದು ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಮುಜರಾಯಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ 100 'ಎ' ವರ್ಗದ ಆಯ್ದ ದೇವಾಲಯಗಳಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತಿ ನವ-ಜೋಡಿಗೆ ಅಗತ್ಯಕ್ಕನುಣವಾಗಿ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5000 ರೂ.ಗಳನ್ನು ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ 10,000 ರೂ.ಗಳನ್ನು ಮತ್ತು ವಧುವಿಗೆ ಚಿನ್ನದ ತಾಳಿ, 2 ಚಿನ್ನದ ಗುಂಡು(ಅಂದಾಜು 8 ಗ್ರಾಂ ತೂಕ ಅಂದಾಜು 40,000 ರೂ.ಗಳಲ್ಲಿ) ಒಟ್ಟು 55,000 ರೂ.ಗಳನ್ನು ಉಚಿತವಾಗಿ ನೀಡಲಾಗುವುದು. ಈ ವೆಚ್ಚವನ್ನು ಸಂಬಂಧಿಸಿದ ಮುಜರಾಯಿ ದೇವಾಲಯ ವತಿಯಿಂದ ಭರಿಸಲಾಗುವುದು. 

ಸಪ್ತಪದಿ ಪರಿಕಲ್ಪನೆಯಡಿ ನಡೆಯುವ ಈ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನವ ಜೀವನಕ್ಕೆ ಕಾಲಿಡುವ ಜೋಡಿಗಳಿಗೆ ಕಂದಾಯ ಇಲಾಖೆ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ ನೀಡುವ 10 ಸಾವಿರ ರೂ. ಬಾಂಡ್ ಸಹ ನೀಡಲಾಗುವುದು. ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 50 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಅವರು ಹೇಳಿದರು. 

ಜಿಲ್ಲೆಯ ದೇವರಾಯನದುರ್ಗ, ಹುಲಿಯೂರು, ಎಡೆಯೂರು ದೇವಾಲಯಗಳಲ್ಲಿ ನಡೆಯುವ ಸಾಮಾಹಿಕ ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಇತರೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ತಗಲುವ ವೆಚ್ಚಗಳನ್ನು ಸಂಬಂಧಿಸಿದ ದೇವಾಲಯದ ನಿಧಿಯಿಂದ ಭರಿಸಲಾಗುವುದು ಎಂದರು. 

12 ಸಪ್ತಪದಿ ರಥ 
ರಾಜ್ಯದ ಆಯ್ದ 12 ದೇವಾಲಯಗಳಿಂದ ಫೆ.13 ರಂದು ಸಪ್ತಪದಿ ರಥ ಹೊರಡಲಿದೆ. ಈ ರಥದಲ್ಲಿ ಸಪ್ತಪದಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ, ಕರಪತ್ರಗಳು ಇರುತ್ತವೆ. ಈ ರಥ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ಈ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಿದೆ ಎಂದರು.

ಅಕ್ಷಯ ತದಿಗೆಯಂದೇ ಸಾಮೂಹಿಕ ವಿವಾಹ: ಎ.26 ರಂದು ಅಕ್ಷಯ ತದಿಗೆ ಇರುವುದರಿಂದ ಒಳ್ಳೆಯ ಮುಹೂರ್ತ ನಿಗಧಿಯಾಗಿದ್ದು, ರಾಜ್ಯಾದ್ಯಂತ ಏಕಕಾಲದಲ್ಲಿ ಎ ದರ್ಜೆಯ 100 ದೇವಾಲಯಗಳಲ್ಲಿ ಈ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  

ಇದೇ ಮೊದಲ ಬಾರಿಗೆ ಈ ಯೋಜನೆ ಜಾರಿಗೆ ತರುತ್ತಿರುವುದರಿಂದ ಈ ವರ್ಷ ಪ್ರಥಮ ಹಂತದಲ್ಲೇ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ. ಮೇ 24ರಂದು 2ನೇ ಹಂತದಲ್ಲಿ ಸಾಮೂಹಿಕ ವಿವಾಹ ನಡೆಸಲಾಗುವುದು. ತಾಲೂಕುಗಳಲ್ಲಿ ಒಂದು ವೇಳೆ ಎ ದರ್ಜೆಯ ದೇವಾಲಯಗಳು ಇಲ್ಲದಿದ್ದರೆ ಐತಿಹಾಸಿಕ ಹಿನ್ನೆಲೆಯುಳ್ಳ ಬಿ ದರ್ಜೆಯ ಹಾಗೂ ಸಿ ದರ್ಜೆಯ ದೇವಾಲಯಗಳನ್ನು ಆಯ್ಕೆ ಮಾಡಿಕೊಂಡು ಈ ಸಪ್ತಪದಿ ಕಾರ್ಯಕ್ರಮ ನಡೆಸಲಾಗುವುದು. ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಬಯಸುವವರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಮಾ. 27 ಕಡೆಯ ದಿನವಾಗಿದೆ ಎಂದರು.

ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಲು ಹಾಗೂ ಬಡವರಿಗೆ ನೆರವಾಗುವ ದೃಷ್ಠಿಯಿಂದ ಸರ್ಕಾರ ಜಾರಿಗೊಳಿಸಿರುವ ಈ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ರಾಜ್ಯದ ಜತೆ ಹೆಚ್ಚಿನ ಸಂಖ್ಯೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಈ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು. 

ಶ್ರೀ ಧರ್ಮಸ್ಥಳ ಕ್ಷೇತ್ರದ ಅಧ್ಯಕ್ಷರಾದ ವಿರೇಂದ್ರ ಹೆಗಡೆ, ಇನ್‍ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಹಾಗೂ ನಟ ಯಶ್ ಅವರು ರಾಯಭಾರಿಯಾಗಿ ಈ ಯೋಜನೆಯ ಯಶಸ್ವಿಗೆ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಸಪ್ತಪದಿ ಯೋಜನೆ ಯಶಸ್ವಿಗೆ ಸಹಕಾರ ನೀಡುವಂತೆ ಎಲ್ಲ ಶಾಸಕರು, ಜಿಲ್ಲಾ ಸಚಿವರು, ಸಾಧು ಸಂತರು, ಮಠಾಧೀಶರುಗಳಿಗೆ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.   

ರಾಜ್ಯದಲ್ಲಿ 36 ಸಾವಿರ ದೇವಾಲಯಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಲಿದ್ದು, ಇವುಗಳ ಆಸ್ತಿ ಸರ್ವೆ ಕಾರ್ಯ ನಡೆಯುತ್ತಿದೆ. ಆಸ್ತಿಗಳ ಸಂಪೂರ್ಣ ಸರ್ವೆ ನಡೆದ ನಂತರ ಗಣಕೀಕರಣಗೊಳಿಸುವುದಾಗಿ ತಿಳಿಸಿದರು. ರಾಜ್ಯದಲ್ಲಿ 25 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ 190 ದೇವಾಲಯಗಳಿವೆ. ಹಾಗೆಯೇ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ 33 ಸಾವಿರ ದೇವಾಲಯಗಳಿವೆ ಎಂದ ಅವರು, ಸಣ್ಣ ದೇವಾಲಯಗಳ ಅರ್ಚಕರಿಗೆ ಇಂತಿಷ್ಟು ಎಂದು ತಸ್ತಿಕ್ ನಿಗದಿಪಡಿಸಲಾಗಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಜ್ಯೋತಿ ಗಣೇಶ್, ಬಿ.ಸಿ. ನಾಗೇಶ್, ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News