ಶಾಹೀನ್ ಶಾಲೆಯ ವಿದ್ಯಾರ್ಥಿಗಳಿಗೆ ಪೊಲೀಸರಿಂದ ಮಾನಸಿಕ ಕಿರುಕುಳ: ಪೀಪಲ್ಸ್ ಫೋರಂ ಆರೋಪ
ಬೀದರ್, ಫೆ.8: ಇಲ್ಲಿನ ಪ್ರತಿಷ್ಟಿತ ಶಾಹೀನ್ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಸಿಎಎ, ಎನ್‌ಆರ್‌ಸಿ ವಿರುದ್ಧ ನಡೆದ ಕಾರ್ಯಕ್ರಮದ ವಿಷಯದಲ್ಲಿ ಪೋಲೀಸರು ಶಾಲಾ ಮಕ್ಕಳೊಡನೆ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಮಕ್ಕಳ ಹಕ್ಕು ಕಲ್ಯಾಣ ಸಮಿತಿಯವರೂ ಕಣ್ಮುಚ್ಚಿ ಕುಳಿತಿದ್ದಾರೆಂದು ಕರ್ನಾಟಕ ಪೀಲ್ಸ್ ಫೋರಂ ಸಂಸ್ಥಾಪಕ, ಕಲಬುರಗಿ ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಡಾ. ಅಜಗರ್ ಚುಲಬುಲ್ ಆರೋಪಿಸಿದ್ದಾರೆ.
ಇಂದು ಬೀದರ್ ನಲ್ಲಿ ವಾರ್ತಾಭಾರತಿ ಜೊತೆ ಮಾತನಾಡಿದ ಅವರು, ಬಾಲಾಪರಾಧಿ ಕಾಯ್ದೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪೋಲೀಸರು ಐದು ಬಾರಿ ಎಂಬತ್ತಕ್ಕೂ ಹೆಚ್ಚಿನ ಮಕ್ಕಳನ್ನು ವಿಚಾರಣೆ ನಡೆಸಿದ್ದಾರೆ. ಪೊಲೀಸರು ತಮ್ಮ ಯೂನಿಫಾರಂನಲ್ಲಿಯೇ ಮಕ್ಕಳನ್ನು ವಿಚಾರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಟಕದಲ್ಲಿ ಪಾತ್ರ ನಿರ್ವಹಿಸಿದ ವಿದ್ಯಾರ್ಥಿಗಳ ಕುರಿತು ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ಕೊಡದೆ ಮತ್ತು ಪೋಷಕರು ಇಲ್ಲದೇ, ತನಿಖಾ ತಂಡ ಯೂನಿಫಾರಂನಲ್ಲಿ ಹೇಗೆ ವಿಚಾರಣೆ ಮಾಡುತ್ತಿದ್ದಾರೆ ? ಒಂಬತ್ತು ವರುಷದ ಮಗುವಿನ ವಿಧವೆ ತಾಯಿಯನ್ನು ಜೈಲಿಗಟ್ಟಿದ್ದಾರೆ. ಆಕೆಯ ಒಂಬತ್ತು ವರುಷದ ಮಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ, ಆ ಮಗು ತಾಯಿಯಿಲ್ಲದೆ, ಶಾಲೆಯ ಶಿಕ್ಷಕರ ಜೊತೆಯಿದ್ದಾಳೆ. ಕಳೆದ ಒಂದು ವಾರದಿಂದ ಪೊಲೀಸರು ಮಕ್ಕಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಂತರ ಪೀಪಲ್ಸ್ ಫೋರಂ ಸಂಚಾಲಕ ಮಾರುತಿ ಮಾನ್ಪಡೆ ಮಾತನಾಡಿ, ಅಭಿನಯ ಪಾತ್ರ ಮಾಡಿ ಪ್ರಧಾನಿ ಅವರನ್ನು ಟೀಕಿಸುವುದು ದೇಶದ್ರೋಹ ಹೇಗಾಗುತ್ತದೆ ? ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿದಕ್ಕೆ ಇಡೀ ಶಾಲೆಯನ್ನೇ ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದ್ದು, ಈ ಮೂಲಕವೇ ಒಂದು ಅಲ್ಪಸಂಖ್ಯಾತರ ಸಮುದಾಯದ ಪ್ರತಿಷ್ಟಿತ ಶಾಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಸಿ ಬಳಿಯುವ ಹುನ್ನಾರ ನಡೆಯುತ್ತಿದೆ. ಇಂತಹ ನೀಚ ಮನಸ್ಥಿತಿ ಹೊಂದಿದ ಕೆಲವು ವ್ಯಕ್ತಿಗಳು ಇದರ ಹಿಂದೆ ಸಂಚು ರೂಪಿಸಿ ವಿದ್ಯಾರ್ಥಿ ಸಮುದಾಯದ ದನಿಯನ್ನ ಹತ್ತಿಕ್ಕುವ ಷಡ್ಯಂತ್ರ ಹೆಣೆಯುತ್ತಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಸಿಎಎ, ಎನ್.ಪಿ.ಆರ್ ಮತ್ತು ಎನ್.ಆರ್.ಸಿ ಕಾಯ್ದೆಗಳು ಜನರ ಆಕ್ರೋಶಕ್ಕೆ ಗುರಿಯಾಗಿದ್ದು, ನಮ್ಮ ದೇಶದ ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಚಿಂತಿಸದ ಪ್ರಧಾನಿಯ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ಕೂಗು ಕೇಳಿಬರುತ್ತಿದೆ. ಆದರೆ ಬಿಜೆಪಿ ನಾಯಕರು ಮತ್ತು ಅವರ ಐಟಿ ಸೆಲ್ ಮುಖಂಡರು ಇಂತಹ ಹೋರಾಟಗಳನ್ನು ಎದುರಿಸಲಾಗದೆ, ತಿರುಚಿ ಪ್ರಜೆಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ವಾಸ್ತವದಲ್ಲಿ ವಿದ್ಯಾರ್ಥಿಗಳು ನಾಟಕ ಮಾಡಿ ಸರ್ಕಾರವನ್ನು ಅಥವಾ ಆಡಳಿತಗಾರರನ್ನು ನಿಂದಿಸಿದರೆ ಅದು ಕೇವಲ ನಿಂದನೆಯಾಗುತ್ತದೆಯೇ ಹೊರತು ದೇಶದ್ರೋಹವಾಗುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಪೂರ್ವಾಗ್ರಹ ಪೀಡಿತರಾಗಿ ಮಕ್ಕಳ ಮೇಲೆ ಹಾಗೂ ಶಿಕ್ಷಣ ಸಂಸ್ಥೆಯ ಮೇಲೆ ದೇಶದ್ರೋಹ ಪ್ರಕರಣ ದಾಖಲು ಮಾಡಿರುವುದು ಖಂಡನೀಯ. ಈ ಮೂಲಕ ದೇಶದ ಪ್ರಜಾ ಸ್ವಾತಂತ್ರ್ಯಕ್ಕೆ ಅವಮಾನ ಮಾಡುತ್ತಿದ್ದು, ಪ್ರಜೆಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಈ ಕೂಡಲೇ ಸರಕಾರ ಎಚ್ಚೆತ್ತುಕೊಂಡು ಶಾಹೀನ್ ಸಂಸ್ಥೆಯ ಮೇಲೆ ನಡೆಯುತ್ತಿರುವ ಆಧಾರ ರಹಿತ ಆರೋಪ ರದ್ದು ಪಡಿಸಿ, ಬಂಧಿತ ಪೋಷಕರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಬೇಕು. ಸರಕಾರ, ಪೊಲೀಸರು ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ನಡೆದುಕೊಳುತ್ತಿರುವ ರೀತಿ ಸರಿಯಲ್ಲ. ಸರಕಾರ ಪ್ರಕರಣ ರದ್ದು ಪಡಿಸದಿದ್ದರೆ, ಕಲ್ಯಾಣ ಕರ್ನಾಟಕ ಬಂದ್ ಗೆ ಕರೆ ನೀಡುವುದು ಹಾಗೂ ಉಗ್ರ ಹೋರಾಟಕ್ಕೆ ಕರೆ ನೀಡುವ ಬಗ್ಗೆ ಚಿಂತಸಬೇಕಾಗುತ್ತಿದೆ ಎಂದು ತಿಳಿಸಿದರು.