ಕರ್ನಾಟಕದ ಪ್ರವಾಹ ಪೀಡಿತ ರೈತರಿಗೆ ಪಾವತಿಯಾಗದ ಬೆಳೆ ಪರಿಹಾರ!
ಬೆಂಗಳೂರು, ಫೆ.9: ಇತ್ತೀಚಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ಉಂಟಾದ ಪ್ರವಾಹದಲ್ಲಾದ ಬೆಳೆ ಹಾನಿಗೆ ಸಂಬಂಧಿಸಿದಂತೆ ಸಾವಿರಾರು ರೈತರಿಗೆ ಇದುವರೆಗೂ ವಿವಿಧ ಕಾರಣಗಳಿಂದ ಪರಿಹಾರವೇ ಸಿಕ್ಕಿಲ್ಲ.
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಹೆಸರು ಹೊಂದಾಣಿಕೆ ಸಮಸ್ಯೆ ಸೇರಿದಂತೆ ಹಲವಾರು ಕಾರಣಗಳಿಂದ ಪರಿಹಾರ ವಿತರಣೆಯಲ್ಲಿ ಸ್ಥಳೀಯ ಆಡಳಿತಗಳು ವಿಫಲವಾಗಿವೆ. ಅಲ್ಲದೆ, ಪರಿಹಾರ ನೀಡುವ ಸಂದರ್ಭದಲ್ಲಿ ಮಳೆಯಾಶ್ರಿತ ರೈತರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇದರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
23 ಜಿಲ್ಲೆಗಳ 103 ತಾಲೂಕುಗಳ ವ್ಯಾಪ್ತಿಯಲ್ಲಿನ ಅಂದಾಜಿ 6.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸುಮಾರು 6.46 ಲಕ್ಷ ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೆ, ಸರಕಾರವು 1,126 ಕೋಟಿ ರೂ.ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆದರೆ, ಈ ಅನುದಾನದಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. 6.46 ಲಕ್ಷ ರೈತರಲ್ಲಿ ಇನ್ನೂ 7, 481 ರೈತರಿಗೆ ಪರಿಹಾರ ಹಣ ಸಿಗಬೇಕಿದೆ. ಅಲ್ಲದೆ, ಇನ್ನೂ 519 ಅರ್ಜಿಗಳು ಪರಿಶೀಲನೆಯ ಹಂತದಲಿವೆ. ಅದರಲ್ಲಿ ಬಳ್ಳಾರಿ, ಬೆಳಗಾವಿ, ಹಾವೇರಿ, ಉತ್ತರ ಕನ್ನಡ ಸೇರಿದಂತೆ ಮತ್ತಿತರೆ ಜಿಲ್ಲೆಗಳಲ್ಲಿ ದಾಖಲೆ ಸಮಸ್ಯೆ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಸಮಸ್ಯೆಗಳು ಎದುರಾಗಿವೆ.
ಅಧಿಕಾರಿಗಳು ನೀಡಿರುವ ಪರಿಹಾರದ ಪಟ್ಟಿಯಲ್ಲಿರುವ ಹೆಸರು-ಬ್ಯಾಂಕ್ ಖಾತೆಯಲ್ಲಿನ ಹೆಸರು ಹೋಂದಾಣಿಕೆ ಆಗದೇ ಇರುವುದು ಸೇರಿದಂತೆ ಹಲವು ಕಾರಣಾಂತರಗಳಿಂದ 2, 280 ರೈತರಿಗೆ ಪರಿಹಾರ ಸಿಕ್ಕಿಲ್ಲ. ಕೆಲವು ಕಡೆಗಳಲ್ಲಿ ಅರ್ಜಿಗಳು ಆನ್‌ಲೈನ್ ಅಪ್‌ಲೋಡ್ ಹಂತದಲ್ಲಿಯೇ ಇವೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಅತಿವೃಷ್ಟಿಯಿಂದ ಹಾನಿಯುಂಟಾಗಿರುವ ಪ್ರದೇಶಗಳಲ್ಲಿ ತಲಾ 2 ಹೆಕ್ಟೇರ್‌ವರೆಗೆ ಪರಿಹಾರವನ್ನು ಸರಕಾರ ನೀಡುವುದಾಗಿ ಘೋಷಿಸಿದೆ. ಅಧಿಕಾರಿಗಳು ಅಂದಾಜು ಹಾನಿ ವರದಿ ಸಲ್ಲಿಸಿರುವ ಪರಿಣಾಮ ಯಾವುದೇ ರೈತರಿಗೂ ಎರಡು ಎಕರೆಗೆ ಪರಿಹಾರ ಸಿಗುತ್ತಿಲ್ಲ. ಬದಲಾಗಿ, ಒಂದು ಎಕರೆ ಅಥವಾ ಒಂದೂವರೆ ಎಕ್ಟೇರ್‌ಗೆ ಅಷ್ಟೇ ಪರಿಹಾರ ನೀಡಲಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲೆಯಾದ್ಯಂತ ಪ್ರವಾಹದಿಂದ ಹಾನಿಯುಂಟಾಗಿರುವ ಪ್ರದೇಶಗಳಲ್ಲಿನ ರೈತರಲ್ಲಿ ಶೇ.99 ರಷ್ಟು ರೈತರಿಗೆ ಪರಿಹಾರದ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಪೂರಕ ಮಾಹಿತಿ ಕೊರತೆಯಿಂದ ಕೆಲವೊಂದಷ್ಟು ಜನರಿಗೆ ಜಮೆಯಾಗಿಲ್ಲ. ಇದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ.
- ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ