ದರಿದ್ರದ ಮೂಲವೇ ಮಾಜಿ ಸಿಎಂ ಸಿದ್ದರಾಮಯ್ಯ: ಸಚಿವ ಸಿ.ಟಿ.ರವಿ

Update: 2020-02-09 13:10 GMT

ಚಿಕ್ಕಮಗಳೂರು, ಫೆ.9: ದರಿದ್ರದ ಮೂಲವೇ ಸಿದ್ದರಾಮಯ್ಯ. ಬಡಜನರು ಬೀದಿಯಲ್ಲಿ ನಿಂತು ಕಣ್ಣೀರಿಡುವಂತಾಗಿದ್ದರೆ ಅದಕ್ಕೆ ಮೂಲ ಕಾರಣವೇ ಸಿದ್ದರಾಮಯ್ಯ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಪಟ್ಟಣದಲ್ಲಿ ಪ್ರಭೋದಿನಿ ಗುರುಕುಲದಲ್ಲಿ ರವಿವಾರ ಆಯೋಜಿಸಿದ್ದ ಅರ್ಧಮಂಡಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರ ದರಿದ್ರ ಸರಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಅವರು 11 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಿದ್ದರು. ಆದರೆ ಮಂಜೂರಾತಿ ನೀಡಿದ ಮನೆಗಳಿಗೆ ಅವರು ಅನುದಾನ ಮೀಸಲಿಟ್ಟಿರಲಿಲ್ಲ. ಅಂದೇ ಅವರು ಮಂಜೂರಾತಿ ನೀಡಿದ ಮನೆಗಳಿಗೆ ಅನುದಾನ ಮೀಸಲಿಟ್ಟಿದ್ದರೆ ಮನೆಗಳ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಲ್ಲುತ್ತಿರಲಿಲ್ಲ. ಚುನಾವಣೆ ಸಂದರ್ಭ ಆಗಿದ್ದರಿಂದ ಅವರು ವರ್ಷಕ್ಕೆ 2ರಿಂದ ಮೂರು ಲಕ್ಷ ಮನೆಗಳಿಗೆ ಮಂಜೂರಾತಿ ನೀಡಿದ್ದರು. ಸದ್ಯ ರಾಜ್ಯ ಸರಕಾರ ದರಿದ್ರದ ಸ್ಥಿತಿ ಬಂದಿಲ್ಲ. ಅಂತಹ ದರಿದ್ರ ಸ್ಥಿತಿ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿತ್ತು ಎಂದರು.

ರಾಮನಗರದಲ್ಲಿ ಆರೆಸ್ಸೆಸ್ ಪಥಸಂಚಲನದ ಬಗ್ಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ, ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಸದನದಲ್ಲಿ ತಾನೂ ಸ್ವಯಂಸೇವಕನೆಂದು ಹೇಳಿಕೊಂಡಿದ್ದಾರೆ. ನಾನೂ ಸಂಘದ ಪ್ರಾರ್ಥನೆ ಹೇಳುತ್ತೇನೆ ಅಂತಲೂ ಹೇಳಿದ್ದರು. ರವಿ, ನಿನಗೆ ಪ್ರಾರ್ಥನೆ ಬರುತ್ತಾ? ಎಂದು ನನ್ನನ್ನೂ ಡಿಕೆಶಿ ಪ್ರಶ್ನೆ ಮಾಡಿದ್ದರು ಎಂದು ಹೇಳಿದ ಅವರು, ಸ್ವಯಂಸೇವಕರ ಭಾವನೆ ಯಾರಲ್ಲಿರುತ್ತದೋ ಅವರು ಸಮಾಜಕ್ಕೆ, ದೇಶಕ್ಕೆ ಒಳ್ಳೆಯದ್ದನ್ನೇ ಬಯಸುತ್ತಾರೆ ಎಂದು ಸಿ.ಟಿ.ರವಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News