ಬಿಜೆಪಿ, ಆರೆಸ್ಸೆಸ್‌ನಿಂದ ಮೀಸಲಾತಿ ರದ್ದುಪಡಿಸುವ ಹುನ್ನಾರ: ಮಲ್ಲಿಕಾರ್ಜುನ ಖರ್ಗೆ

Update: 2020-02-09 14:45 GMT

ಬೆಂಗಳೂರು, ಫೆ.9: ಬಿಜೆಪಿ, ಆರೆಸ್ಸೆಸ್‌ನಿಂದ ದೇಶದಲ್ಲಿ ಮೀಸಲಾತಿಯನ್ನು ರದ್ದುಪಡಿಸುವ ಹುನ್ನಾರ ನಡೆದಿದ್ದು, ಇದೇ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೂಡ ಆಘಾತ ತಂದಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನದ ಪರಿಚ್ಛೇದ 64, 64(ಎ), 64(ಬಿ)ರಲ್ಲಿ ಎಸ್ಸಿ-ಎಸ್ಟಿ ಹಾಗೂ ಓಬಿಸಿಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಅನುಗುಣವಾಗಿ ಸ್ಪಷ್ಟ ಉಲ್ಲೇಖವಿದ್ದರೂ ಸುಪ್ರೀಂ ಕೋರ್ಟ್ ಮೀಸಲಾತಿಯನ್ನು ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿರುವುದು ಆಘಾತ ತಂದಿದೆ. ಈ ತೀರ್ಪುನ್ನು ನಾನು ವೈಯಕ್ತಿಕವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಉತ್ತರಾಖಾಂಡ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಅಧಿಕಾರದಲ್ಲಿದ್ದು, ಸುಪ್ರೀಂಕೋರ್ಟ್‌ನಲ್ಲಿ ಎಸ್ಸಿ, ಎಸ್ಟಿಗೆ ಸಂಬಂಧಿಸಿದ ಮೀಸಲಾತಿ ವಿಚಾರದಲ್ಲಿ ಸರಿಯಾಗಿ ವಾದವನ್ನೇ ಮಾಡಿಲ್ಲ. ಈ ಕೆಲಸವನ್ನು ಉತ್ತರಪ್ರದೇಶವೂ ಮಾಡಲು ಹೊರಟಿದೆ. ಬಿಜೆಪಿ, ಆರೆಸ್ಸೆಸ್‌ನವರ ಅಜೆಂಡ ಕೂಡಾ ಇದೆ ಆಗಿದೆ ಎಂದು ಹೇಳಿದರು.

ಎಸ್ಸಿ-ಎಸ್ಟಿ ಹಾಗೂ ಓಬಿಸಿಗಳಿಗೆ ನೀಡಿರುವ ಮೀಸಲಾತಿಯನ್ನು ಕಡ್ಡಾಯಗೊಳಿಸುವಂತೆ ಕೇಂದ್ರ ಸರಕಾರ ತಕ್ಷಣವೇ ಕಾಯ್ದೆಗೆ ತಿದ್ದುಪಡಿ ತಂದು ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಬೇಕು. ಏಳು ದಶಕಕ್ಕೂ ಹೆಚ್ಚು ಕಾಲ ನೀಡಿರುವ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ತೀರ್ಪಿನ ಮೇರೆಗೆ ನಾವುಗಳು ಪ್ರಶ್ನಿಸುವುದಿಲ್ಲ ಎಂದು ಕೇಂದ್ರ ಸರಕಾರ ಜವಾಬ್ದಾರಿಯಿಂದ ನುಣುಚಿಕೊಂಡರೆ, ದೇಶದ ಜನರಿಗೆ ಹಾಗೂ ಎಸ್ಸಿ, ಎಸ್ಟಿಗಳಿಗೆ ನೀಡಿರುವ ರಕ್ಷಣೆಯ ಆಶ್ವಾಸನೆ ಸುಳ್ಳು ಎಂದು ಅಭಿಪ್ರಾಯ ವ್ಯಕ್ತವಾಗುತ್ತದೆ. ಅಲ್ಲದೆ, ಮೀಸಲಾತಿ ವಿಚಾರದಲ್ಲೂ ಕೇಂದ್ರ ಸರಕಾರದ ಕುಮ್ಮಕ್ಕು ಇದೆ ಎಂದು ನುಡಿದರು.

ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಅರ್ಜಿಯನ್ನು ದಾಖಲಿಸಿಕೊಂಡು ಮೀಸಲಾತಿ ಬಗ್ಗೆ ವಿಚಾರಣೆಯನ್ನು ನಡೆಸಬೇಕು. ಆಗ ಮೀಸಲಾತಿಯ ಅವಶ್ಯಕತೆಯ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತದೆ ಎಂದು ಹೇಳಿದರು.

ಮೀಸಲಾತಿ ವಿಚಾರವಾಗಿ ಲೋಕಸಭೆಯಲ್ಲಿ ಹಾಗೂ ಹೊರಗಡೆ ತೀವ್ರ ಹೋರಾಟ ನಡೆಸುತ್ತೇವೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತಕ್ಕಾಗಿ ಅಂಬೇಡ್ಕರ್, ಸರ್ದಾರ್ ವಲ್ಲಭಾಯ್ ಪಟೇಲ್, ಮಹಾತ್ಮಾ ಗಾಂಧಿಜಿ ಸೇರಿ ಇನ್ನಿತರರ ಪೋಟೊಗಳನ್ನು ಬಳಸಿಕೊಳ್ಳುತ್ತದೆ. ಅಲ್ಲದೆ, ದೇಶವನ್ನು ಇಬ್ಭಾಗ ಮಾಡುವ ಕುತಂತ್ರಕ್ಕೂ ಕೈಹಾಕಿದೆ ಎಂದು ಕಿಡಿಕಾರಿದರು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಂಸದ ಚಂದ್ರಪ್ಪ, ಕಾಂಗ್ರೆಸ್ ಮುಖಂಡ ವಿ.ಆರ್. ಸುದರ್ಶನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News