×
Ad

ಸಹಕಾರಿ ಬ್ಯಾಂಕ್ ಗಳಲ್ಲಿನ ರೈತರ ಸಾಲದ ಮೇಲಿನ ಬಡ್ಡಿ ಸಂಪೂರ್ಣ ಮನ್ನಾ: ಸಿಎಂ ಯಡಿಯೂರಪ್ಪ

Update: 2020-02-09 20:29 IST

ಹುಬ್ಬಳ್ಳಿ, ಫೆ.9: ರೈತರಿಗೆ ಅನುಕೂಲ ಆಗಬೇಕೆಂದು ಪಿಎಲ್ಡಿ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಸಾಲದ ಹಾಗೂ ಸುಸ್ತಿ ಮೇಲಿನ ಬಡ್ಡಿ ಅನ್ನು ಸಂಪೂರ್ಣ ಮನ್ನಾ ಮಾಡಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳ ದಿನಾಂಕ 5ರಂದು ರಾಜ್ಯದ ಆಯವ್ಯಯ ಮಂಡಿಸಲಾಗುವುದು. ಇನ್ನು, ಹಲವು ದಿನಗಳಿಂದ ನಾಡಿನ ರೈತರು ಸಾಲದಲ್ಲಿ ಸಿಲುಕಿದ್ದು, ಈ ಸಂಬಂಧ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುತ್ತಿದೆ. ಇದರಿಂದ ಸರಕಾರಕ್ಕೆ 400 ಕೋಟಿ ರೂ. ಹೊರೆ ಬೀಳುವುದು ಎಂದು ತಿಳಿಸಿದರು.

ಅದೇ ರೀತಿ, ಮಾರ್ಚ್ ಅಂತ್ಯದ ಒಳಗಾಗಿ ಸಾಲ ಮರುಪಾವತಿಸುವ ರೈತರಿಗೆ ರಿಯಾಯಿತಿಯನ್ನು ಸಹ ನೀಡಲು ಚಿಂತನೆ ನಡೆಸಲಾಗಿದೆ ಎಂದ ಅವರು, ಪ್ರಸ್ತುತ ಸಾಲಿನ ಆಯವ್ಯಯ ಮಂಡನೆ ಸಂಬಂಧ ಸಿದ್ಧತೆಗಳು ಪ್ರಾರಂಭವಾಗಿದ್ದು, ರೈತ ಸ್ನೇಹಿ ಬಜೆಟ್ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವರ ಖಾತೆ ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರ ಖಾತೆಗಳನ್ನು ಹಂಚಿಕೆ ಮಾಡಿ ಜವಾಬ್ದಾರಿ ವಹಿಸಲಾಗುವುದು ಎಂದ ಅವರು, ಯಾವುದೇ ನೂತನ ಜಿಲ್ಲೆಯ ರಚನೆ ಪ್ರಸ್ತಾವ ಸರಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮಹಾದಾಯಿ ನೀರು ಹಂಚಿಕೆ ವಿಚಾರ ಸುಪ್ರಿಂ ಕೋರ್ಟಿನಲ್ಲಿದ್ದು, ರಾಜ್ಯದ ಅಡ್ವೊಕೇಟ್ ಜನರಲ್ ಅವರಿಗೆ ಮೇಲ್ಮನವಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ ಎಂದ ಅವರು, ಶೀಘ್ರದಲ್ಲಿಯೇ ಮಹದಾಯಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ಇನ್ನು, ಬಜೆಟ್‌ನಲ್ಲೂ ಮಹದಾಯಿ ಯೋಜನೆಗೆ ಹಣ ಮೀಸಲಿರಿಸಲಾಗುವುದು ಎಂದು ಯಡಿಯೂರಪ್ಪ ನುಡಿದರು.

‘ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಾಗುವುದು. ಮಾರ್ಚ್ ಒಳಗೆ ಸಾಲ ಮರುಪಾವತಿಸುವವರಿಗೆ ರಿಯಾಯಿತಿಯನ್ನೂ ನೀಡಲು ಯೋಚಿಸಲಾಗುತ್ತಿದೆ’
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News