ಭವಿಷ್ಯದಲ್ಲಿ ಇಡೀ ಜಗತ್ತು ಹಿಂದೂ ಧರ್ಮಾಧಾರಿತ ಶಿಕ್ಷಣ ಕೇಳುತ್ತದೆ: ಆರೆಸ್ಸೆಸ್ ನಾಯಕ ಮೋಹನ್ ಭಾಗವತ್

Update: 2020-02-09 15:34 GMT

ಚಿಕ್ಕಮಗಳೂರು, ಫೆ.9: ಭವಿಷ್ಯದಲ್ಲಿ ಇಡೀ ಜಗತ್ತು ಹಿಂದೂ ಧರ್ಮಾಧಾರಿತವಾದ ಗುರುಕುಲ ಶಿಕ್ಷಣ ಪದ್ಧತಿಯನ್ನು ಕೇಳುತ್ತದೆ ಮತ್ತು ಅಳವಡಿಸಿಕೊಳ್ಳುತ್ತದೆ ಎಂದು ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಅಭಿಪ್ರಾಯಿಸಿದ್ದಾರೆ.

ರವಿವಾರ ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಪಟ್ಟಣದಲ್ಲಿರುವ ಪ್ರಭೋದಿನಿ ಗುರುಕುಲದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರ್ಧಮಂಡಲೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇಡೀ ಜಗತ್ತು ನಮ್ಮ ವಿಚಾರವನ್ನು ಒಪ್ಪಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಇಡೀ ಜಗತ್ತಿಗೆ ಗುರುಕುಲ ಶಿಕ್ಷಣ ಪದ್ಧತಿಯನ್ನು ಪಸರಿಸಬೇಕಿದೆ ಎಂದ ಅವರು, ಹಿಂದಿನ ಕಾಲದಲ್ಲಿ ವಿದ್ಯೆ, ಧನ, ಶಕ್ತಿಗಳನ್ನು ಸಾಧು ಸಂತರು ತಮ್ಮಲ್ಲಿದ್ದ ಜ್ಞಾನದ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಈ ಮೂರೂ ಶಕ್ತಿಗಳನ್ನು ಸಮಾಜದಲ್ಲಿ ಕಲಹಗಳನ್ನು ಹೆಚ್ಚಿಸಲು ಬಳಸಲಾಗುತ್ತಿದೆ ಎಂದು ಅವರು ಹೇಳಿದರು.

ಆಧುನಿಕ ಶಿಕ್ಷಣ ಪದ್ಧತಿ ಕೇವಲ ಮಾಹಿತಿಯನ್ನು ನೀಡುವ ಶಿಕ್ಷಣವಾಗಿದೆ ಎಂದು ಅಭಿಪ್ರಾಯಿಸಿದ ಅವರು, ಶಿಕ್ಷಣವು ವ್ಯಕ್ತಿಯ ಜೀವನಕ್ಕೆ ಆಧಾರವಾಗಿರಬೇಕು. ಉತ್ತಮ ಜೀವನ ನಡೆಸುವಂತಹ, ಬದುಕು ಗೆಲ್ಲುವಂತಹ ಶಿಕ್ಷಣದ ಅಗತ್ಯ ಇಂದು ಹೆಚ್ಚಿದ್ದು, ಗುರುಕುಲ ಶಿಕ್ಷಣ ಪದ್ಧತಿಯಿಂದ ಇಂತಹ ಶಿಕ್ಷಣ ನೀಡುತ್ತದೆ ಎಂದರು.

ಅಮೇರಿಕ ವಿದ್ವಾಂಸ ಡೇವಿಡ್ ಪ್ರಾಲಿ ಮಾತನಾಡಿ, ವಿಶ್ವಕ್ಕೆ ಭಾರತದ ಸಾಂಸ್ಕೃತಿಕ ಕೊಡುಗೆಗಳು ಅಪಾರ. ಇವುಗಳಲ್ಲಿ ಯೋಗ ಮತ್ತು ಆಯುರ್ವೇದ ಮಹತ್ವದ್ದಾಗಿದೆ. ಯೋಗ ಮತ್ತು ಆಯುರ್ವೇದ ಮನುಷ್ಯನ ಆರೋಗ್ಯ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಬಾರದು, ಅವುಗಳು ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಬಳಕೆಯಾಗಬೇಕು ಎಂದರು.

ಭಾರತದ ಸ್ವಾತಂತ್ರ್ಯ ಪೂರ್ವದ ಇತಿಹಾಸ ಅವಿಸ್ಮರಣೀಯವಾಗಿವೆ. ಅದರ ಬಗ್ಗೆ ಜಗತ್ತಿಗೆ ಹೆಚ್ಚಿನ ತಿಳುವಳಿಕೆಯೇ ಇಲ್ಲ. ಅವುಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳುವ ಆವಶ್ಯಕತೆ ಇದೆ. ಭಾರತದ ಸಂಸ್ಕೃತಿ, ಸಂಪ್ರದಾಯಗಳು ಇಡೀ ಪ್ರಪಂಚವೇ ಮೆಚ್ಚುವಂತದ್ದು, ಅವು ವಿಶ್ವಕ್ಕೆ ಮಾದರಿಯಾಗಿವೆ. ಈ ಕಾರಣಕ್ಕೆ ಭಾರತ ಇಂಡಿಯಾ ಆಗಿ ಬದಲಾಗಬಾರದು, ಭಾರತವೇ ಆಗಿರಬೇಕು ಎಂದು ಅಭಿಪ್ರಾಯಿಸಿದ ಅವರು, ನಾವು ಇಂದಿನ ತಂತ್ರಜ್ಞಾನದ ಗುಲಾಮರಾಗದೇ ಆ ತಂತ್ರಜ್ಞಾನದ ಮೂಲಕ ಹೊಸ ಹೊಸ ಅನ್ವೇಷಣೆಗಳನ್ನು ಮಾಡಬೇಕು ಎಂದರು.

ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ, ಅರ್ಧ ಮಂಡಲೋತ್ಸವ ಸಮಿತಿ ಗೌರವಾಧ್ಯಕ್ಷ ವಿ.ಆರ್.ಗೌರಿಶಂಕರ್, ಸಮಿತಿ ಅಧ್ಯಕ್ಷ  ವಿಜಯಸಂಕೇಶ್ವರ, ಕಾರ್ಯಾಧ್ಯಕ್ಷ ಎಚ್.ಬಿ.ರಾಜಗೋಪಾಲ್, ಕಾರ್ಯದರ್ಶಿ ದೀಪಕ್‍ ದೊಡ್ಡಯ್ಯ, ಕಚಂಪಾಡಿ ಸುಬ್ರಹ್ಮಣ್ಯ ಭಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News