ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆಗಳು ದೇಶಕ್ಕೆ ಮಾರಕ: ಪ್ರಗತಿಪರ ಚಿಂತಕ ಶಿವಸುಂದರ್

Update: 2020-02-09 17:12 GMT

ಮೈಸೂರು, ಫೆ.9: ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ದೇಶಕ್ಕೆ ಮಾರಕವಾದ ಕಾಯ್ದೆಗಳಾಗಿದ್ದು, ಇದರ ಹಿಂದೆ ಸಂಘಪರಿವಾರದ ಕುತಂತ್ರ ಅಡಗಿದೆ ಎಂದು ಪ್ರಗತಿಪರ ಚಿಂತಕ ಶಿವಸುಂದರ್‌ ಅಭಿಪ್ರಾಯಪಟ್ಟಿದ್ದಾರೆ.

ನಗರದ ಖಾಸಗಿ ಹೋಟೆಲ್‌ಲ್ಲಿ ರವಿವಾರ ಪೀಪಲ್ಸ್ ಲೀಗಲ್ ಫೋರಂ ವತಿಯಿಂದ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಮಡಿಕೇರಿ ನಾಲ್ಕು ಜಿಲ್ಲೆಗಳ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಆಯೋಜಿಸಿದ್ದ 'ಎನ್‌ಆರ್ಸಿ, ಎನ್‌ಪಿಆರ್, ಸಿಎಎ ಒಳಗಿನ ಹುನ್ನಾರಗಳೇನು?' ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾವಂತರಾದ ನೀವುಗಳು ಇದರ ಅನಾನೂಕೂಲವನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ದೇಶವನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ನಾವುಗಳು ಜಾಗೃತರಾಗಬೇಕಿದೆ ಎಂದು ಅವರು ಹೇಳಿದರು.
ಈ ಬಾರಿ ಸೆನ್ಸಸ್‌ಗೆ ಬರುವ ವೇಳೆ ಎನ್‌ಪಿಆರ್‌ಗೂ ಮಾಹಿತಿ ಕೇಳಲಾಗುತ್ತದೆ. ಸೆನ್ಸಸ್‌ಗೆ ಮಾತ್ರ ಮಾಹಿತಿ ಒದಗಿಸಿ ಎನ್‌ಪಿಆರ್‌ಅನ್ನು ತಿರಸ್ಕಿರಸಬೇಕು. ಎನ್‌ಪಿಆರ್ ಮೂಲಕ ದೇಶದ ಪೌರತ್ವ ಸಾಬಿತು ಪಡಿಸಲು ಯತ್ನಿಸುತ್ತಾರೆ. ನಮ್ಮ ದಾಖಲೆ ನೀಡಿದರೂ ನಮ್ಮ ತಂದೆ, ತಾತನ ದಾಖಲೆ ಕೇಳುತ್ತಾರೆ. ಅದನ್ನೆಲ್ಲಾ ನಾವು ತೋರಿಸಲು ಸಾಧ್ಯವೆ? ಎಂದು ಅವರು ಪ್ರಶ್ನಿಸಿದರು.

ಸಿಎಎ ಕಾಯ್ದೆ ಬಗ್ಗೆ ನಿಮ್ಮ ನಿಮ್ಮ ಗ್ರಾಮದಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಈ ದೇಶದ ವಿದ್ಯಾರ್ಥಿಗಳು ಸೇರಿದಂತೆ ಪ್ರಗತಿಪರರು ಬುದ್ಧಿಜೀವಿಗಳು ನಿವೃತ್ತ ನ್ಯಾಯಾಧೀಶರು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಗಾರದಲ್ಲಿ ಅಖಿಲ ಭಾರತೀಯ ವಕೀಲ ಒಕ್ಕೂಟದ ಶ್ರೀನಿವಾಸ್ ಕುಮಾರ್, ಮಂಡ್ಯ ವಕೀಲ ಆರ್.ಜಗನ್ನಾಥ್, ಮೈಸೂರು ವಕೀಲ ತಿಮ್ಮಯ್ಯ ಉಪಸ್ಥಿತರಿದ್ದರು. ವಕೀಲ ಬಾಬುರಾಜ್, ಎಸ್.ಪಿ.ಮಹೇಶ್ ಸೇರಿದಂತೆ ಹಲವು ವಕೀಲರು, ಸಾಮಾಜಿಕ ಕಾರ್ಯಕರ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News