ಸಾಮಾನ್ಯ ಮೌಲ್ಯಾಂಕನ ಮಾರ್ಗಸೂಚಿ ಬಿಡುಗಡೆ

Update: 2020-02-09 18:15 GMT

ಬೆಂಗಳೂರು, ಫೆ.9: 2020 ನೇ ಸಾಲಿನಲ್ಲಿ 7 ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಿರುವ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆಯ ರೂಪುರೇಷೆ ಮತ್ತು ಮಾರ್ಗಸೂಚಿಗಳನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

ಪರೀಕ್ಷೆಗೆ ತಗಲುವ ವೆಚ್ಚ 6.40 ಕೋಟಿ ರೂ.ಗಳನ್ನು ಕೇಂದ್ರೀಕೃತ ದಾಖಲಾತಿ ಘಟಕದಿಂದ ಪಡೆಯಲು ಕರ್ನಾಟಕ ಶಾಲಾಗುಣಮಟ್ಟ ವೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿಗೆ ಸೂಚನೆ ನೀಡಲಾಗಿದೆ. ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ಹೇಗಿರಬೇಕು ಎಂಬುದರ ಕುರಿತು 8 ಷರತ್ತು ವಿಧಿಸಲಾಗಿದೆ.

ಸಾಮಾನ್ಯ ಮೌಲ್ಯಾಂಕನ ಪರೀಕ್ಷೆಯ ವೌಲ್ಯಮಾಪನವನ್ನು ಶಾಲಾ ಹಂತದಲ್ಲಿಯೇ ನಡೆಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪರೀಕ್ಷೆಯ ನಂತರ ಮೌಲ್ಯಮಾಪನವನ್ನು ಡಯಟ್ ಕೇಂದ್ರಗಳಲ್ಲಿ ಸರಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಿ ರಿಪೋರ್ಟ್‌ಕಾರ್ಡ್ ಸಿದ್ದಮಾಡಿ ವಿದ್ಯಾರ್ಥಿಗಳಿಗೆ ನೀಡುತ್ತೇವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಒಂದು ತಿಂಗಳ ಹಿಂದೆಯೇ ಹೇಳಿದ್ದರು. ಇದೀಗ ಶಾಲಾ ಹಂತದಲ್ಲಿಯೇ ನಡೆಸುತ್ತೇವೆ ಎಂದು ಮಾರ್ಗ ಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಏನೆಲ್ಲಾ ಷರತ್ತುಗಳಿವೆ: ಇತರೆ ತರಗತಿಗಳ ಪರೀಕ್ಷೆಗಳಂತೆ ಶಾಲಾ ಆವರಣದಲ್ಲಿಯೇ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸುವುದು. ಸಂಕಲನಾತ್ಮಕ ವೌಲ್ಯಮಾಪನ-2 ರ ಬದಲು ನಡೆಸುವ ವೌಲ್ಯಾಂಕನ ಇದಾಗಿರುತ್ತದೆ. ಪ್ರಶ್ನೆ ಪತ್ರಿಕೆಯನ್ನು ದ್ವಿತೀಯ ಪಠ್ಯವನ್ನಾಧರಿಸಿ 40 ಅಂಕಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಲಿಖಿತ ರೂಪದಲ್ಲಿ ನಡೆಸುವುದು.

ಬಾಹ್ಯ ಮೂಲದ ಪರಿವೀಕ್ಷಣೆಯಲ್ಲಿ ಸಾಮಾನ್ಯ ಮೌಲ್ಯಾಂಕನ ಪ್ರಕ್ರಿಯೆ ನಿರ್ವಹಿಸದೇ ಅದೇ ಶಾಲೆಯ ಶಿಕ್ಷಕರ ಮೂಲಕ ನಿರ್ವಹಿಸುವುದು. ಪ್ರಶ್ನೋತ್ತರ ಪ್ರಕ್ರಿಯೆಯನ್ನು ಕರ್ನಾಟಕ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಸಿದ್ದಪಡಿಸಿ ವಿತರಿಸಲಿದೆ. 2019-20 ನೇ ಸಾಲಿಗೆ ಈ ಪ್ರಶ್ನೋತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಶಾಲಾ ಹಂತದಲ್ಲಿಯೇ ನಡೆಸುವುದು. ಫಲಿತಾಂಶದ ವಿವರವನ್ನು ಮುಖ್ಯಶಿಕ್ಷಕರು ನಿಗದಿತ ಅವಧಿಯಲ್ಲಿ ವಿದ್ಯಾರ್ಥಿ ಟ್ರಾಕಿಂಗ್ ವ್ಯವಸ್ಥೆ(ಎಸ್‌ಎಟಿಎಸ್)ಯಲ್ಲಿ ಭರ್ತಿಮಾಡಬೇಕು ಎಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News