ಎತ್ತಿನಹೊಳೆಗೆ ಕೆಲವರಿಂದ ಅಡ್ಡಿ; ಯೋಜನೆ ವಿಳಂಬ; ಶಾಸಕ ರಮೇಶ್‍ ಕುಮಾರ್

Update: 2020-02-09 18:28 GMT

ಕೋಲಾರ:- ಎತ್ತಿನಹೊಳೆ ನೀರಿಗೆ 2 ಸಾವಿರ ಎಕರೆ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಕೆಲವರು ಅಡ್ಡಪಡಿಸುತ್ತಿದ್ದಾರೆ, ಈ ನೀರು ಹರಿದರೆ ಜಿಲ್ಲೆ ಸುಭಿಕ್ಷವಾಗುತ್ತದೆ ಎಂದು ಶಾಸಕ ಕೆ.ಆರ್.ರಮೇಶ್‍ ಕುಮಾರ್ ತಿಳಿಸಿದರು.

ಸುಗಟೂರು ಎಸ್‍ಎಫ್‍ಸಿಎಸ್ ಆಶ್ರಯದಲ್ಲಿ ಡಿಸಿಸಿ ಬ್ಯಾಂಕಿನಿಂದ 11.37 ಕೋಟಿ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.

ಎತ್ತಿನಹೊಳೆಗೆ ಸಕಲೇಶಪುರ ರೈತರು ಸ್ಪಂದಿಸಿ ಸಹಕಾರ ನೀಡಿದ್ದರಿಂದಲೇ ಪವರ್ ಹೌಸ್,ಅಣೆಕಟ್ಟು ಕಾಲುವೆ ನಿರ್ಮಾಣವಾಗಿದೆ, ಆದರೆ ನೀರು ಸಂಗ್ರಹಿಸಬೇಕಾದ 2 ಸಾವಿರ ಎಕರೆ ವಿಸ್ತೀರ್ಣಕ್ಕೆ ಅಣೆಕಟ್ಟು ನಿರ್ಮಾಣಕ್ಕೆ ಅಡ್ಡಿಯಾಗಿದ್ದು, ಅದನ್ನು ನಿವಾರಿಸಬೇಕಾಗಿದೆ ಎಂದರು.


ಕೆಸಿ ವ್ಯಾಲಿ ನೀರು ಬಂದರೂ ದಾರಿದ್ರ್ಯ ತಪ್ಪಿಲ್ಲ. ನಿಯಮಬಾಹಿರವಾಗಿ ಮೋಟಾರ್ ಪಂಪ್ ಇಟ್ಟುಕೊಂಡಿರುವ ರೈತರ ಮನವೊಲಿಸುವ ಕೆಲಸವನ್ನು ಮುಖಂಡರು ಸ್ವಯಂಸೇವಕರಂತೆ ಮಾಡಿ ಎಂದು ಕಾರ್ಯಕರ್ತರಿಗೆ ತಾಕೀತು ಮಾಡಿದರು.

ಕೆಸಿ ವ್ಯಾಲಿ ನೀರನ್ನು ಕೆಲವು ರೈತರು ಮಾರ್ಗಮಧ್ಯೆ ಮೋಟಾರ್ ಪಂಪ್ ಮೂಲಕ ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದ ಅವರು, ಇದು ಅಂತರ್ಜಲ ವೃದ್ದಿಯ ಯೋಜನೆಯಾಗಿದ್ದು, ನೀರು ಆಕಡೆಗೂ ಬೇಡವೇ ಎಂದು ಪ್ರಶ್ನಿಸಿದರು.

ಮಹಿಳಾ ಸಂಘಗಳಿಗೆ ಒಂದು ಲಕ್ಷ ಸಾಲ ವಿತರಣೆ ಕುರಿತು ಮಾತನಾಡಿದ ಅವರು, ರಮೇಶ್ ಕುಮಾರ್ ಜೀವಂತವಾಗಿದ್ದರೆ ಸದನದಲ್ಲಿ ಯಾರೇ ಇರಲಿ ಎಳೆದು, ಕೂರಿಸಿ ಜನರ ಕೆಲಸ ಮಾಡಿಸುತ್ತೇನೆ, ನನಗೆ ನಿಮ್ಮ ಆಶೀರ್ವಾದ ಆ ಶಕ್ತಿ ನೀಡಿದೆ ಎಂದರು.

ಶುದ್ದ ನೀರಿನ ಘಟಕಗಳನ್ನು ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಸ್ಥಾಪಿಸಿರುವುದರಿಂದ ಮಹಿಳೆಯರು ಮೂಳೆ ಸಂಬಂಧಿ ಅನೇಕ ಕಾಯಿಲೆಗಳಿಂದ ಮುಕ್ತವಾಗಿದ್ದಾರೆ, ರೋಗಗಳು ಕಡಿಮೆಯಾಗಿದೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಹೆಣ ನೀಡಲು ಹಣ ಕೀಳುವ ದುಸ್ಥಿತಿ ತಡೆಗೆ ತಾವು ಮುಂದಾಗಿದ್ದಕ್ಕೆ ಹಲವರ ವಿರೋಧ ಎದುರಿಸಬೇಕಾಯಿತು, ನಾನು ಯಾರಿಗೂ ಹೆದರಲ್ಲ, ನೇರವಾಗಿ ಇದ್ದಕ್ಕಿದ್ದಂತೆ ಹೇಳುತ್ತೇನೆ ಮಾಡಿಯೇ ತೀರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜಿಪಂ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ಬ್ಯಾಂಕ್ ನಿರ್ದೇಶಕರಾದ ಅನಿಲ್‍ಕುಮಾರ್, ನಾಗನಾಳ ಸೋಮಣ್ಣ, ಯಲವಾರ ಸೊಣ್ಣೇಗೌಡ, ಎಸ್‍ಎಫ್‍ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News