ಕಲಬುರಗಿ: ಕಸದ ಬುಟ್ಟಿ ಸೇರಲು ಅರ್ಹವಾದ ಕಸಾಪ ನಿರ್ಣಯ

Update: 2020-02-10 06:19 GMT

ಕನ್ನಡದ ಸಾಹಿತಿಗಳು, ಕವಿಗಳು ವರ್ತಮಾನದಿಂದ, ವಾಸ್ತವಗಳಿಂದ ಅದೆಷ್ಟು ಮೈಲು ದೂರದಲ್ಲಿದ್ದಾರೆ ಎನ್ನುವುದಕ್ಕೆ, 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ತೆಗೆದುಕೊಂಡ ನಿರ್ಣಯಗಳೇ ಸಾಕ್ಷಿ. ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬ ಆರೋಪಗಳು ವ್ಯಾಪಕವಾಗಿವೆ. ವಾಸ್ತವದ ಜೊತೆಗೆ ಯಾವ ರೀತಿಯಲ್ಲೂ ಸಂಬಂಧವನ್ನು ಹೊಂದಿರದ ಇಂತಹ ನಿರ್ಣಯಗಳನ್ನು ಗಂಭೀರವಾಗಿ ಯಾಕೆ ಸ್ವೀಕರಿಸಬೇಕು ಎನ್ನುವ ಪ್ರಶ್ನೆಯನ್ನು ಪ್ರತಿಯಾಗಿ ಸರಕಾರವೇ ಕೇಳುವಂತಾಗಿದೆ.. ತಮ್ಮ ಜೀತಕ್ಕೆ ತುದಿಗಾಲಿನಲ್ಲಿ ನಿಂತಿರುವ ಸಾಹಿತಿಗಳು ತೆಗೆದುಕೊಂಡ ನಿರ್ಣಯಗಳನ್ನು ಸರಕಾರ ಗಂಭೀರವಾಗಿ ಸ್ವೀಕರಿಸುತ್ತದೆ ಎಂದು ಭಾವಿಸುವುದೇ ದೊಡ್ಡ ತಪ್ಪು. ಟಿಎ, ಡಿಎ ಮೂಲಕ ನಡೆಸಲ್ಪಡುವ, ಯಾವ ಬದ್ಧತೆಯೂ ಇಲ್ಲದ ಸಾಹಿತಿಗಳನ್ನೊಳಗೊಂಡ, ಈ ಕನ್ನಡ ಜನಜಾತ್ರೆ ಮಂಡಿಸುವ ಯಾವುದೇ ನಿರ್ಣಯಗಳು ಪ್ರಭುತ್ವದ ಮೇಲೆ ಒತ್ತಡಗಳನ್ನು ಹೇರದು. ಯಾವಾಗ ಕನ್ನಡ ಅಸ್ಮಿತೆ ಪ್ರಭುತ್ವಕ್ಕೆ ಪ್ರತಿರೋಧದ ಶಕ್ತಿಯಾಗಿ ಮಾರ್ಪಡುತ್ತದೆಯೋ, ಸಾಹಿತ್ಯ, ಸಂಸ್ಕೃತಿ, ಭಾಷೆ ಜನಚಳವಳಿಯೊಳಗೆ ಬೆರೆತು ಕನ್ನಡತನವೆನ್ನುವುದು ಚುನಾವಣೆಯಲ್ಲೂ ಪ್ರಮುಖ ವಿಷಯವಾಗಿ ಮಾರ್ಪಡುತ್ತದೆಯೋ ಆಗ ಮಾತ್ರ ಸಾಹಿತ್ಯ ಸಮ್ಮೇಳನದ ನಿರ್ಣಯಕ್ಕೆ ಸರಕಾರ ತಲೆಬಾಗುತ್ತದೆ. ಆದುದರಿಂದಲೇ ನೂರು ಜನ ನಿರ್ದಿಷ್ಟ ಜಾತಿಯ ಜನರು ಸೇರಿ ಸಮ್ಮೇಳನ ನಡೆಸಿದರೆ ತಕ್ಷಣ ಅವರ ಕೂಗಿಗೆ ಸರಕಾರ ಕಿವಿಯಾಗುತ್ತದೆ.

ಆದರೆ ಲಕ್ಷಾಂತರ ಕನ್ನಡಿಗರು ಸಾಹಿತ್ಯ, ಭಾಷೆಯ ಹೆಸರಲ್ಲಿ ಒಂದಾಗಿ ಬೇಡಿಕೆಯನ್ನು ಮುಂದಿಟ್ಟರೆ ಸರಕಾರ ಅದಕ್ಕೆ ಕಿವುಡಾಗುತ್ತದೆ. ಈ ಬಾರಿ ತೆಗೆೆದುಕೊಂಡ ನಿರ್ಣಯಗಳೂ, ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್‌ನ ಗೋದಾಮಿನಲ್ಲಿ ಧೂಳು ತಿನ್ನುತ್ತಿರುವ ರಾಶಿ ರಾಶಿ ನಿರ್ಣಯಗಳ ಜೊತೆಗೆ ಐಕ್ಯವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಕಲಬುರಗಿಯಲ್ಲಿ ತೆಗೆದುಕೊಂಡ ನಿರ್ಣಯಗಳಲ್ಲಿ ಅತ್ಯಂತ ಮುಖ್ಯವಾದದ್ದು ಈಗಾಗಲೇ ಚರ್ಚೆಯಲ್ಲಿರುವ ‘ಕಲಿಕಾ ಮಾಧ್ಯಮ’ಕ್ಕೆ ಸಂಬಂಧಿಸಿರುವುದು. ‘ಖಾಸಗಿ ಶಾಲೆಗಳು ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಾಗಲಿ’ ಎಂದು ಸಮ್ಮೇಳನದಲ್ಲಿ ಒತ್ತಾಯಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಾಗಿರುವುದರಿಂದ ಹೀಗೆ ಒತ್ತಾಯಿಸುವುದು ಅನಿವಾರ್ಯ ಎಂಬ ನಿಟ್ಟಿನಲ್ಲಿ ಈ ನಿರ್ಣಯವನ್ನು ಸೇರಿಸಿದ್ದಾರೆಯೋ ಅಥವಾ ಇದರ ಹಿಂದೆ ಇನ್ನಿತರ ದುರುದ್ದೇಶಗಳಿವೆಯೋ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ರಾಜ್ಯವೆಂದಲ್ಲ, ಇಡೀ ದೇಶದಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆಗಳು ಅಣಬೆಗಳಂತೆ ತಲೆಎತ್ತಿವೆ ಮಾತ್ರವಲ್ಲ, ಸರಕಾರಿ ಶಾಲೆಗಳನ್ನು ‘ಇಂಗ್ಲಿಷ್ ಮಾಧ್ಯಮ’ ಈಗಾಗಲೇ ಆಹುತಿ ತೆಗೆದುಕೊಂಡಿದೆ.

ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಎನ್ನುವ ರಾಜ್ಯದ ನಿಲುವಿಗೆ ನ್ಯಾಯಾಲಯದಲ್ಲೇ ಸೋಲಾಗಿದೆ. ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ- ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಎನ್ನುವ ನಿಲುವಿನಿಂದಾಗಿ, ಬಡ ಕೆಳಸ್ತರದ ವಿದ್ಯಾರ್ಥಿಗಳು ಮತ್ತು ಮೇಲ್‌ವರ್ಗದ ವಿದ್ಯಾರ್ಥಿಗಳ ನಡುವೆ ಅಂತರಗಳು ಹೆಚ್ಚುತ್ತಿವೆ. ಶಾಲೆ, ಕಾಲೇಜುಗಳು ಪಕ್ಕಕ್ಕಿರಲಿ, ವಿದೇಶಿ ವಿಶ್ವವಿದ್ಯಾನಿಲಯಗಳೇ ಭಾರತದೊಳಗೆ ಕಾಲಿಡುವುದಕ್ಕೆ ಕ್ಷಣಗಣನೆ ನಡೆಯುತ್ತಿರುವ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು ಎಂದು ಸರಕಾರವನ್ನು ಒತ್ತಾಯಿಸುವುದು, ಸರಕಾರದನ್ನು ಮಾನ್ಯ ಮಾಡುತ್ತದೆ ಎಂದು ನಿರೀಕ್ಷಿಸುವುದು ಸಾಹಿತಿಗಳ ರಾಜಕೀಯ ಅನಕ್ಷರತೆಯನ್ನು ಹೇಳುತ್ತದೆ. ‘ಎಲ್ಲ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಾಗಲಿ’ ಎಂದು ಒತ್ತಾಯಿಸುತ್ತಿರುವ ಈ ಸಾಹಿತಿಗಳ ನಿಜವಾದ ಗುರಿ ಖಾಸಗಿ ಶಾಲೆಗಳಲ್ಲ ಎನ್ನುವ ಸೂಕ್ಷ್ಮವನ್ನು ನಾವು ಗಮನಿಸಬೇಕು. ಅವರ ಕಣ್ಣುಗಳಿರುವುದು, ಇದೀಗ ಸರಕಾರಿ ಶಾಲೆಗಳಲ್ಲಿ ಆರಂಭಗೊಂಡಿರುವ ಇಂಗ್ಲಿಷ್ ಮಾಧ್ಯಮ. ಕನ್ನಡ ಮಾಧ್ಯಮಗಳಿಗೆ ವಿದ್ಯಾರ್ಥಿಗಳೇ ಇಲ್ಲ ಎನ್ನುವ ಸನ್ನಿವೇಶದಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ಮತ್ತು ವಿದ್ಯಾರ್ಥಿಗಳ ನಡುವಿನ ಸಾಮಾಜಿಕ ಅಂತರಗಳನ್ನು ತಗ್ಗಿಸುವ ಮಹತ್ವದ ಉದ್ದೇಶದಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಲಾಗಿದೆ.

ಸರಕಾರಿ ಶಾಲೆಗಳ ಮೊದಲ ಆದ್ಯತೆ ಸರ್ವರಿಗೂ ಉತ್ತಮ ಶಿಕ್ಷಣ ನೀಡುವುದೇ ಹೊರತು, ಸರ್ವರಿಗೂ ಕನ್ನಡ ಕಲಿಸುವುದಲ್ಲ. ಆದರೆ ಎರಡನೆಯ ಆದ್ಯತೆಯಾಗಿ ಆಯಾ ರಾಜ್ಯಗಳು ತಮ್ಮ ರಾಜ್ಯ ಭಾಷೆಗಳನ್ನು ಬೆಳೆಸಲು ಸರಕಾರಿ ಶಾಲೆಗಳನ್ನು ಬಳಸಬಹುದು. ಆದರೆ ಇಂಗ್ಲಿಷ್ ಮೀಡಿಯಂ ಕಾರಣದಿಂದ ಸರಕಾರಿ ಶಾಲೆಗಳೇ ಅಳಿದು ಹೋಗುತ್ತವೆ ಎಂಬ ಸ್ಥಿತಿ ಬಂದಾಗ ಮೊದಲು ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸ ನಡೆಯಬೇಕೇ ಹೊರತು, ಭಾಷೆಯ ಹೆಸರಿನಲ್ಲಿ ಸರಕಾರಿ ಶಾಲೆಗಳನ್ನು ಇಲ್ಲವಾಗಿಸುವುದಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಾಂತಿಕಾರಕ ನಿರ್ಧಾರವೊಂದನ್ನು ತೆಗೆದುಕೊಂಡು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂನ್ನು ಆರಂಭಿಸಿದೆ. ಇದರಿಂದಾಗಿ ದಲಿತರು, ಹಿಂದುಳಿದವರ್ಗಗಳು, ಅಲ್ಪಸಂಖ್ಯಾತರು ಸರಕಾರಿ ಶಾಲೆಗಳಲ್ಲೇ ಖಾಸಗಿ ಶಾಲೆಗಳ ಸವಲತ್ತುಗಳನ್ನು ಪಡೆದುಕೊಳ್ಳುವಂತಾಗಿದೆ. ಇಂದು ಕನ್ನಡವನ್ನು ನಾವು ಉಳಿಸಬೇಕು ಎಂದರೆ, ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಗಳನ್ನು ಆರಂಭಿಸುವ ಜೊತೆ ಜೊತೆಗೇ ಕನ್ನಡಕ್ಕೂ ಒಂದನೇ ತರಗತಿಯಿಂದ ಪ್ರಾಮುಖ್ಯತೆಯನ್ನು ನೀಡಬೇಕು ಅಥವಾ ಒಂದನೇ ತರಗತಿಯಿಂದಲೇ ಕನ್ನಡ-ಇಂಗ್ಲಿಷ್ ಜೊತೆ ಜೊತೆಯಾಗಿ ಸಾಗುವಂತೆ ಮಾಡಬೇಕು. ಇಲ್ಲವಾದರೆ ಕನ್ನಡವೂ ಇಲ್ಲ, ಸರಕಾರಿ ಶಾಲೆಗಳು ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.

  ಒಂದು ಕಾಲದಲ್ಲಿ ಕೆಳವರ್ಗದ ಜನರು ಸಂಸ್ಕೃತ ಕಲಿಯದಂತೆ ತಡೆದ ಜನರೇ ಸಾಹಿತ್ಯ ಸಮ್ಮೇಳನದಲ್ಲಿ ಬಡವರು ಇಂಗ್ಲಿಷ್ ಕಲಿಯುವುದರ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಜನಬಳಕೆಯಿಂದ ಸಂಸ್ಕೃತವನ್ನು ದೂರಮಾಡಿ ಅದನ್ನು ಮೃತಭಾಷೆಯಾಗಿ ಪರಿವರ್ತಿಸಿ ಇದೀಗ ‘ಇಂಗ್ಲಿಷ್ ಕಲಿಯಬೇಡಿ, ಸಂಸ್ಕೃತ ಕಲಿಯಿರಿ’ ಎಂದು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲೇ ಕರೆ ನೀಡುತ್ತಿದ್ದಾರೆ. ಮೇಲ್‌ಜಾತಿಯ ಬಹುತೇಕ ಮಕ್ಕಳು ಇಂಗ್ಲಿಷ್ ಮೀಡಿಯಂನಲ್ಲಿ ಕಲಿತು ಲಂಡನ್, ಅಮೆರಿಕ ಸೇರಿದ್ದಾರೆ. ಇದೀಗ ಕೆಳಸ್ತರದ ಮಕ್ಕಳು ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ಕಲಿಯುತ್ತಿರುವಾಗ, ಅವರು ತಮ್ಮ ಮಕ್ಕಳ ಜೊತೆಗೆ ಎಲ್ಲಿ ಸ್ಪರ್ಧೆಗೆ ಇಳಿಯುತ್ತಾರೆಯೋ ಎಂಬ ಭಯದಿಂದ ಕನ್ನಡವನ್ನು ತೋರಿಸಿ ಇಂಗ್ಲಿಷ್ ವಿರುದ್ಧ ಬಾಣ ಬಿಡುತ್ತಿದ್ದಾರೆ.

ಸಾಹಿತ್ಯ ಸಮ್ಮೇಳನದ ನಿರ್ಣಯ ಸರಕಾರಿ ಶಾಲೆಗಳ ಶೋಷಿತ ಮಕ್ಕಳನ್ನೇ ಗುರಿಯಾಗಿಸಿಕೊಂಡಿದೆ. ಆದುದರಿಂದ ಈ ನಿರ್ಣಯ ಕಸದ ಬುಟ್ಟಿಗೆ ಸೇರುವುದಕ್ಕೆ ಎಲ್ಲ ರೀತಿಯಲ್ಲೂ ಅರ್ಹವಾಗಿದೆ. ಇಂದು ಅತ್ಯಂತ ವಾಸ್ತವದ ಕಣ್ಣಲ್ಲಿ ಭಾಷಾ ಮಾಧ್ಯಮಗಳ ಕುರಿತಂತೆ ಚರ್ಚೆ ನಡೆಯಬೇಕು. ಕನ್ನಡ ಮತ್ತು ಇಂಗ್ಲಿಷ್‌ನ್ನು ಜೊತೆಯಾಗಿ ಕಲಿಸುವುದಕ್ಕೆ ಆದ್ಯತೆ ನೀಡುವುದೇ ನಮಗಿರುವ ಅತ್ಯುತ್ತಮ ಮಾರ್ಗ. ಈ ಮೂಲಕ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ಜೊತೆಗೆ ಸೆಡ್ಡು ಹೊಡೆಯಬಹುದು. ಬಡವರು ಇಂಗ್ಲಿಷ್ ಕಲಿತಂತೆಯೂ ಆಯಿತು. ಕನ್ನಡದ ಜೊತೆಗೆ ಸರಕಾರಿ ಶಾಲೆಗಳು ಉಳಿದು ಸಾಮಾಜಿಕ ‘ನ್ಯಾಯ’ ದೊರೆತಂತೆಯೂ ಆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News