ದೇಶ ಕಟ್ಟುವ ಜವಾಬ್ದಾರಿ ಯುವ ಜನರ ಮೇಲಿದೆ : ಕೆ.ಜಿ.ಬೋಪಯ್ಯ

Update: 2020-02-09 18:36 GMT

ಮಡಿಕೇರಿ ಫೆ.9 : ಯುವ ಜನರಿಗಾಗಿ ಸರ್ಕಾರ ಯುವ ಕೌಶಲ್ಯ ಕಾರ್ಯಕ್ರಮ ಜಾರಿಗೊಳಿಸಿದ್ದು, ಇದರ ಪ್ರಯೋಜನ ಪಡೆಯುವಂತಾಗಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ಹೇಳಿದರು.  

ಆಂತರಿಕ ಗುಣಮಟ್ಟ ಭರವಸಾ ಕೋಶ, ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಉದ್ಯೋಗ ಮಾಹಿತಿ ಹಾಗೂ ಯುವ ಸಬಲೀಕರಣ ಕೇಂದ್ರ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರ ಸಹಯೋಗದೊಂದಿಗೆ ‘ಯುವಕೌಶಲ್ಯ-ಮೃದು ಕೌಶಲ್ಯ ತರಬೇತಿ ಮತ್ತು ಮೌಲ್ಯಮಾಪನ ಕುರಿತು ವಿರಾಜಪೇಟೆ ಸ.ಪ್ರ.ದ ಕಾಲೇಜಿನ ವಾಣಿಜ್ಯ ವಿಭಾಗದ ಧ್ವನಿ-ದೃಶ್ಯ ಕೊಠಡಿಯಲ್ಲಿ ನಡೆದ ವಿಶೇಷ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.    

ದೇಶ ಕಟ್ಟುವ ದೊಡ್ಡ ಜವಾಬ್ದಾರಿ ಯುವ ಜನರಲ್ಲಿದೆ. ಆ ನಿಟ್ಟಿನಲ್ಲಿ ಮುನ್ನಡೆಯಬೇಕು. ವಿದ್ಯಾರ್ಥಿಗಳು ಮುಂದೆ ಬರುವ ಎಲ್ಲಾ ಸವಾಲುಗಳನ್ನು ಎದುರಿಸಲು ಶಕ್ತರಾಗಬೇಕು. ವಿದ್ಯಾರ್ಥಿಗಳಲ್ಲಿ ವಿಭಿನ್ನ ಪ್ರತಿಭೆ ಇರುತ್ತದೆ. ಆ ಪ್ರತಿಭೆಗೆ ಪೂರಕವಾಗಿ ವ್ಯವಸ್ಥೆಗಳನ್ನು ಮಾಡಬೇಕು ಎಂದರು.  

ಯುವ ಶಕ್ತಿಯ ಸದ್ಭಳಕೆಯಾಗಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಪ್ರತಿಭೆಯನ್ನು ಸದುಪಯೋಗ ಮಾಡಿಕೊಂಡು ದೇಶವನ್ನು ಅಭಿವೃದ್ಧಿಪಡಿಸಬೇಕು. ಎಲ್ಲಾ ದೇಶಗಳಿಗೆ ಭಾರತವನ್ನು ಮಾದರಿಯಾನ್ನಾಗಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ ಅವರು ಮಾತನಾಡಿ ವಿದ್ಯಾರ್ಥಿಗಳು ಕೇವಲ ವಿದ್ಯೆ ಪಡೆಯುವುದರ ಜೊತೆಗೆ ಮೃದು ಕೌಶಲ್ಯ ಪಡೆಯಬೇಕು. ಶೈಕ್ಷಣಿಕ ವಿದ್ಯಾರ್ಹತೆಗೆ ಅನುಗುಣವಾಗಿ ಮೃದು ಕೌಶಲ್ಯ ಅಳವಡಿಸಿಕೊಳ್ಳುಬೇಕು. ಎಲ್ಲರೂ ಸ್ವಯಂ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಯುವಕೌಶಲ್ಯ ತರಬೇತಿ ನೀಡಲಾಗುತ್ತದೆ ಎಂದರು. 

ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ದಂತೆ ರಾಜ್ಯ ಸರ್ಕಾರವು ಕೌಶಲ್ಯ ಕರ್ನಾಟಕ ಎಂಬ ಯೋಜನೆ ಮುಖಾಂತರ ರಾಜ್ಯದಲ್ಲಿರುವ ಎಲ್ಲಾ ಉದ್ಯೋಗಾಕಾಂಕ್ಷಿಗಳಲ್ಲಿ ಕೌಶಲ್ಯ ತುಂಬುವ ಕೆಲಸವನ್ನು ಮಾಡುತ್ತಿದೆ ಎಂದು ಅವರು ಹೇಳಿದರು.

ಪೊನ್ನಂಪೇಟೆ ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರಾದ ಚೆರಿಯನ್ ಅವರು ಮಾತನಾಡಿ ಪ್ರತಿಯೋಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ರೀತಿಯ ಕೌಶಲ್ಯ ಇರುತ್ತದೆ. ವಿದ್ಯಾಭ್ಯಾಸ, ಸಂವಹನ ಕೌಶಲ್ಯ, ಗಣಕಯಂತ್ರ ಜ್ಞಾನವಿರಬಹುದು. ಸಂದರ್ಶನ ಎದುರಿಸುವ ಅಂಜಿಕೆ, ಸಂವಹನದ ತೊಂದರೆ ಇರಬಹುದು ಇದನ್ನು ಕೌಶಲ್ಯ ಪಡೆಯುವುದರ ಮೂಲಕ ಬಲಹೀನತೆಯನ್ನು ದೂರ ಮಾಡಬಹುದು ಎಂದರು. 

ಸಂದರ್ಶನಕ್ಕೆ ಹೋದಾಗ ಮೃದು ಕೌಶಲ್ಯವನ್ನು ಕೇಳುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಯಲ್ಲಿ ನೋಂದಾಯಿಸಿ ಮೃದು ಕೌಶಲ್ಯ ಅಥವಾ ಅಲ್ಪಾವಧಿ ಕೋರ್ಸ್‍ಗಳಲ್ಲಿ ಕೌಶಲ್ಯವನ್ನು ಪಡೆಯಬಹುದು. ನಿಮ್ಮ ವಿದ್ಯಾಭ್ಯಾಸಕ್ಕೆ ಪೂರಕವಾದ ಕೌಶಲ್ಯವನ್ನು ಪಡೆಯಿರಿ ಎಂದು ಅವರು ಹೇಳಿದರು.

ವಿರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ವಿರಾಜಪೇಟೆ ಸ.ಪ್ರ.ದ ಕಾಲೇಜಿನ ಪ್ರಾಂಶುಪಾಲರಾದ ಟಿ.ಕೆ.ಬೋಪಯ್ಯ, ನಿರ್ವಹಣಾ ಶಾಸ್ತ್ರದ ಮುಖ್ಯಸ್ಥರಾದ ಮಂಜುನಾಥ್, ಆಡಳಿತ ವರ್ಗ, ಬೋಧಕರು ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಜಗನ್ನಾಥ ಅವರು ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರದ ಉಪನ್ಯಾಸಕರಾದ ಗೀತಾ ನಾಯ್ಡು ಅವರು ನಿರೂಪಿಸಿದರು. ಆಂಗ್ಲ ಉಪನ್ಯಾಸಕರಾದ ನಾಗರಾಜ್ ಮೂರ್ತಿ ಅವರು ವಂದಿಸಿದರು.  ಕನ್ನಡ ಉಪನ್ಯಾಸಕರಾದ ಧರ್ಮಶೀಲ ಅವರು ಪ್ರಾರ್ಥಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News