ಫೆಬ್ರವರಿ 24-25ರಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ

Update: 2020-02-11 15:48 GMT

ಫೆ.24ರಂದು ಟ್ರಂಪ್ ಭಾರತ ಭೇಟಿ

ಹೊಸದಿಲ್ಲಿ, ಫೆ.11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ದೃಢಪಡಿಸಿದೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಟ್ರಂಪ್ ಭಾರತಕ್ಕೆ ನೀಡುವ ಪ್ರಥಮ ಭೇಟಿ ಇದಾಗಿದೆ.

ಎರಡು ದಿನಗಳ ಭಾರತ ಭೇಟಿ ಸಂದರ್ಭ ಅವರೊಂದಿಗೆ ಪತ್ನಿ, ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಇರಲಿದ್ದಾರೆ. ಫೆ.24 ಮತ್ತು 25ರಂದು ಭಾರತದಲ್ಲಿರುವ ಟ್ರಂಪ್ ಹಾಗೂ ಅವರ ಪತ್ನಿ, ಅಹಮದಾಬಾದ್ ಹಾಗೂ ಹೊಸದಿಲ್ಲಿಗೆ ಭೇಟಿ ನೀಡಲಿದ್ದಾರೆ.

ಭಾರತ ಮತ್ತು ಅಮೆರಿಕ ಮಧ್ಯೆ 2018ರಿಂದ ಬಾಕಿ ಉಳಿದಿರುವ ವ್ಯಾಪಾರ ಒಪ್ಪಂದಕ್ಕೆ ಈ ಸಂದರ್ಭ ಸಹಿ ಹಾಕುವ ನಿರೀಕ್ಷೆಯಿದೆ. ಅಲ್ಲದೆ ಭಾರತೀಯ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ಸೋಮವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

  ಕಳೆದ ವರ್ಷ ಅಮೆರಿಕದ ಹ್ಯೂಸ್ಟನ್ ‌ನಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ರೀತಿ ಅಹ್ಮದಾಬಾದ್‌ ನಲ್ಲಿ ಟ್ರಂಪ್‌ ಗಾಗಿ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಟ್ರಂಪ್ ಆಗ್ರಾದ ವಿಶ್ವವಿಖ್ಯಾತ ತಾಜ್ಮಹಲ್‌ ಗೂ ಭೇಟಿ ನೀಡುವ ನಿರೀಕ್ಷೆಯಿದೆ. ಈ ತಿಂಗಳ ಆರಂಭದಲ್ಲಿ ಅಮೆರಿಕದ ಉನ್ನತ ಮಟ್ಟದ ನಿಯೋಗವೊಂದು ಭಾರತಕ್ಕೆ ಭೇಟಿ ನೀಡಿ ಅಧ್ಯಕ್ಷರ ಭೇಟಿಯ ಪೂರ್ವಸಿದ್ಧತೆಯನ್ನು ಪರಿಶೀಲಿಸಿತ್ತು. ಜನವರಿ 26ರ ಗಣರಾಜ್ಯೋತ್ಸವಕ್ಕೆ ಟ್ರಂಪ್‌ರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತಾದರೂ ಆ ಸಂದರ್ಭ ಟ್ರಂಪ್ ಬೇರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಕಾರಣ ಭೇಟಿ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News