ಶಮನವಾಗದ ಸಚಿವರ ಅಸಮಾಧಾನ: ಹಲವು ಮಂತ್ರಿಗಳ ಖಾತೆ ಬದಲಿಸಿದ ಬಿಎಸ್‌ವೈ

Update: 2020-02-11 12:22 GMT

ಬೆಂಗಳೂರು, ಫೆ.11: ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ ಬೆನ್ನಲ್ಲೆ ಸೃಷ್ಟಿಯಾಗಿದ್ದ ಅಸಮಾಧಾನ ಶಮನಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕೆಲ ಸಚಿವರ ಖಾತೆಗಳನ್ನು ಪರಿಷ್ಕರಣೆ ಮಾಡಿದ್ದು, ಈ ಸಂಬಂಧ ರಾಜ್ಯಪಾಲರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಸಚಿವ ಬಿ.ಸಿ.ಪಾಟೀಲ್ ಅವರಿಗೆ ಕೃಷಿ, ಕೆ.ಗೋಪಾಲಯ್ಯ-ಆಹಾರ ಮತ್ತು ನಾಗರಿಕ ಪೂರೈಕೆ, ಶಿವರಾಂ ಹೆಬ್ಬಾರ್- ಸಕ್ಕರೆ ಹಾಗೂ ಕಾರ್ಖಾನೆ ಹಾಗೂ ಆನಂದ್‌ ಸಿಂಗ್ ಅವರಿಗೆ ಅರಣ್ಯ ಮತ್ತು ಜೀವಿಶಾಸ್ತ್ರ ಖಾತೆ, ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಬಳಿ ಇದ್ದ ಅಲ್ಪಸಂಖ್ಯಾತರ ಕಲ್ಯಾಣ ಖಾತೆಯನ್ನು ಶ್ರೀಮಂತ್ ಪಾಟೀಲ್ ಅವರಿಗೆ ನೀಡಲಾಗಿದೆ.

ಸಣ್ಣ ಕೈಗಾರಿಕೆ ಖಾತೆ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಕೆ.ಗೋಪಾಲಯ್ಯ, ನಿನ್ನೆಯಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದರು. ಜತೆಗೆ ಬಿ.ಸಿ.ಪಾಟೀಲ್ ಅರಣ್ಯ ಖಾತೆ ನೀಡಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದರು.

ಆನಂದ್ ಸಿಂಗ್ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ಬದಲು ಅರಣ್ಯ ಹಾಗೂ ಜೈವಿಕ ಪರಿಸರ ಇಲಾಖೆಯನ್ನು ನೀಡಲಾಗಿದೆ. ಕೆ.ಗೋಪಾಲಯ್ಯ ಅವರಿಗೆ ಸಣ್ಣ ಕೈಗಾರಿಕೆ ಬದಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಲಾಗಿದೆ. ಶಿವರಾಮ್ ಹೆಬ್ಬಾರ್ ಅವರಿಗೆ ಕಾರ್ಮಿಕ ಇಲಾಖೆ ಜೊತೆಗೆ ಸಕ್ಕರೆ ಖಾತೆ ನೀಡಲಾಗಿದೆ.

ಸಚಿವ ಸಿ.ಸಿ.ಪಾಟೀಲ್ ಅವರಿಗೆ ಗಣಿ ಮತ್ತು ಭೂವಿಜ್ಞಾನ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯನ್ನು ನೀಡಲಾಗಿದೆ. ಬೈರತಿ ಬಸವರಾಜು ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಹೊರತುಪಡಿಸಿ ನಗರಾಭಿವೃದ್ಧಿ ಖಾತೆ ನೀಡಲಾಗಿದೆ.

ಬಸವರಾಜ ಬೊಮ್ಮಾಯಿ-ಗೃಹ ಇಲಾಖೆ (ಗುಪ್ತಚರ ಹೊರತು), ಮುಖ್ಯಮಂತ್ರಿ ಯಡಿಯೂರಪ್ಪ-ಡಿಪಿಎಆರ್, ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಧನ, ಗುಪ್ತಚರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಸಣ್ಣ ಕೈಗಾರಿಕೆ ಸೇರಿ ಹಂಚಿಕೆಯಾಗದ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಉಸ್ತುವಾರಿಗೂ ಕಸರತ್ತು: ಖಾತೆ ಹಂಚಿಕೆ ಮುಗಿದ ಬೆನ್ನಲ್ಲೆ ಇದೀಗ ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಸಚಿವರ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು ತನಗೆ ಇದೇ ಜಿಲ್ಲೆ ಉಸ್ತುವಾರಿ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದು, ಸಿಎಂ ಯಡಿಯೂರಪ್ಪಗೆ ಹೊಸ ತಲೆಬಿಸಿ ಆರಂಭವಾಗಿದೆ.

ಬಸವರಾಜ ಬೊಮ್ಮಾಯಿ-ಗೃಹ

ಸಿ.ಸಿ.ಪಾಟೀಲ್-ಗಣಿ ಮತ್ತು ಭೂ ವಿಜ್ಞಾನ, ವಾಣಿಜ್ಯ ಮತ್ತು ಕೈಗಾರಿಕೆ

ಪ್ರಭು ಚೌವ್ಹಾಣ್- ಪಶುಸಂಗೋಪನಾ

ಆನಂದ್‌ ಸಿಂಗ್-ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ

ಶ್ರೀಮಂತ್ ಪಾಟೀಲ್-ಜವಳಿ, ಅಲ್ಪಸಂಖ್ಯಾತರ ಕಲ್ಯಾಣ

ಕೆ.ಗೋಪಾಲಯ್ಯ-ಆಹಾರ ಮತ್ತು ನಾಗರಿಕ ಪೂರೈಕೆ

ಬೈರತಿ ಬಸವರಾಜು-ನಗರಾಭಿವೃದ್ಧಿ(ಬೆಂಗಳೂರು ಅಭಿವೃದ್ಧಿ ಹೊರತು)

ಬಿ.ಸಿ.ಪಾಟೀಲ್-ಕೃಷಿ

ಶಿವರಾಮ್ ಹೆಬ್ಬಾರ್- ಕಾರ್ಮಿಕ ಮತ್ತು ಸಕ್ಕರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News