2019ರ ಬೀಜ ಮಸೂದೆ: ಪ್ರಧಾನಿ ಮೋದಿ, ಕೇಂದ್ರ ಸಚಿವ ಡಿವಿಎಸ್‌ಗೆ ಸಿದ್ದರಾಮಯ್ಯ ಪತ್ರ

Update: 2020-02-11 12:08 GMT

ಬೆಂಗಳೂರು, ಫೆ.11: ‘2019ರ ಬೀಜ ಮಸೂದೆ’ಯು ಜೀವ ವೈವಿಧ್ಯ ರಕ್ಷಣೆ, ರೈತರ ಹಿತಾಸಕ್ತಿಯನ್ನು ರಕ್ಷಿಸುವುದರ ಪರವಾಗಿಲ್ಲ. ಬದಲಾಗಿ ಖಾಸಗಿ ಬೀಜ ಉತ್ಪಾದಕರಿಗೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಣೆ ಹಾಕಿ ಲಾಭ ತಂದುಕೊಡಲು ಹೊರಟಿರುವಂತೆ ಕಾಣುತ್ತದೆ’ ಎಂದು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಮಂಗಳವಾರ ಸುದೀರ್ಘ ಪತ್ರ ಬರೆದಿರುವ ಸಿದ್ದರಾಮಯ್ಯ, ಬೀಜ ಮಸೂದೆ ಕುರಿತು ದೇಶಾದ್ಯಂತ ಚರ್ಚೆ ನಡೆಸುತ್ತಿದ್ದು, ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ರೈತರಿಗೆ ಮಾರಕವಾಗಿರುವ ಬೀಜ ಮಸೂದೆಯನ್ನು ಕಾಯ್ದೆ ಮಾಡುವ ಬದಲು ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಕೋರಿದ್ದಾರೆ.

ಈಗಾಗಲೇ ಬೀಜ, ಔಷಧಿ ಮತ್ತು ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿ ಮಾರಾಟ ಮಾಡುವ ಬೃಹತ್ ಕಂಪೆನಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಬಳಲುತ್ತಿರುವ ರೈತಾಪಿ ಸಮುದಾಯಗಳು ತಾವು ಉತ್ಪಾದಿಸಿದ ಬೀಜವನ್ನು ಕೊಡು-ಕೊಳ್ಳಲು ಈ ಕಾಯಿದೆಯು ಅಡ್ಡಿ ಮಾಡುತ್ತಿದೆ. ಬೀಜ, ಗೊಬ್ಬರ, ಔಷಧಿ, ಮಾರುಕಟ್ಟೆಯ ಕುರಿತು ಕೇಂದ್ರ ಸರಕಾರವು ಜನಪರವಾದ ನೀತಿಯನ್ನು ರೂಪಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ದೇಶದ ಕೃಷಿ ಸಂಸ್ಕೃತಿಯಲ್ಲಿ ಬೀಜವೆಂಬುದು ಸಮುದಾಯದ ಸ್ವತ್ತು. ಇದನ್ನು ಜೀವ ವೈವಿಧ್ಯ ಕಾನೂನು ಪುರಸ್ಕರಿಸುತ್ತದೆ. ಇವುಗಳನ್ನು ಪರಿಗಣಿಸದ ಈ ಮಸೂದೆಯು ಬೀಜ ನೋಂದಣಿ, ದೃಢೀಕರಣ ಇವುಗಳಿಗೆ ಮಹತ್ವ ನೀಡುತ್ತದೆ. ಇಂಥದನ್ನು ಆದಿವಾಸಿ, ಅಲೆಮಾರಿ ರೈತರು ಮಾಡಲು ಸಾಧ್ಯವೆ? ಹಾಗಾಗಿ ಇದು ಬೃಹತ್ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರದಂತೆ ಕಾಣುತ್ತಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಬೀಜ ಉತ್ಪಾದಕ ಸಂಸ್ಥೆಗಳಾದ ರಾಷ್ಟ್ರ, ರಾಜ್ಯ ಬೀಜ ನಿಗಮಗಳು, ಕೃಷಿ ವಿವಿಗಳ ಸದೃಢಪಡಿಸಿ ರೈತರಿಗೆ ನೆರವಾಗುವಂತೆ ನೋಡಿಕೊಳ್ಳುವ ಪ್ರಸ್ತಾಪವೆ ಈ ಮಸೂದೆಯಲ್ಲಿ ಇಲ್ಲ. ಇವುಗಳ ಸಶಕ್ತೀಕರಣವೆಂದರೆ ಉತ್ತರದಾಯಿತ್ವದ ಚೌಕಟ್ಟು ನೀಡಿದಂತೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಡಾ.ಸ್ವಾಮಿನಾಥನ್ ವರದಿಯ ಶಿಫಾರಸ್ಸುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು. ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿರುವ ಅವರು, 2019ರ ಬೀಜ ಮಸೂದೆಯನ್ನು ಕಾಯ್ದೆಯಾಗದಂತೆ ನೋಡಿಕೊಳ್ಳಬೇಕು. ರೈತರ ಹಿತಾಸಕ್ತಿಯನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News