ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬುದು ಕರಾಳ ತೀರ್ಪು: ದಸಂಸ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ

Update: 2020-02-11 13:17 GMT

ಬೆಂಗಳೂರು, ಫೆ.11: ಮೀಸಲಾತಿ ಕುರಿತ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮೀಸಲಾತಿ ಎಂಬುದು ಮೂಲಭೂತ ಹಕ್ಕಲ್ಲ ಎಂಬ ತೀರ್ಪು ನೀಡಿರುವುದು ಅಚ್ಚರಿ ಹುಟ್ಟಿಸಿದೆ, ಇದೊಂದು ಕರಾಳ ತೀರ್ಪಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಎನ್. ಮೂರ್ತಿ ತಿಳಿಸಿದ್ದಾರೆ.

ಮಂಗಳವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನದ 16ನೇ ವಿಧಿ ಈಗಾಗಲೇ ಇದೆ. ಇದಕ್ಕೆ ನ್ಯಾಯ ನೀಡುವ ಸಲುವಾಗಿ 16(4), 16(4ಬಿ) ಸಹ ಇದೆ. ಆದರೆ, ಇದು ಗೊತ್ತಿದ್ದೂ ಸುಪ್ರೀಂ ಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿರುವುದು ಅಚ್ಚರಿ ಮೂಡಿಸಿದೆ ಎಂದು ತಿಳಿಸಿದರು.

ದೇಶದಲ್ಲಿ ಪರಿಶಿಷ್ಟರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿ ಸರಕಾರಗಳು ಇರುವ ಕಡೆಗಳಲ್ಲೆಲ್ಲಾ ಇಂಥ ಪ್ರಯತ್ನ ನಡೆಯುತ್ತಿರುವುದು ದುರದೃಷ್ಟಕರ. ಮೀಸಲಾತಿ ರದ್ದು, ಸಂವಿಧಾನ ಬದಲು ಮಾಡುವ ಪ್ರಯತ್ನಕ್ಕೆ ಬಿಜೆಪಿ ಮೊದಲಿಂದಲೂ ಕೈ ಹಾಕುತ್ತಿದೆ. ಬಿಜೆಪಿ ಸರಕಾರಗಳು ಇರುವ ಕಡೆಗಳಲ್ಲೆಲ್ಲಾ ದಲಿತರ ಮೇಲೆ ಶೋಷಣೆಗಳು ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ಮೂಲಭೂತ ಹಕ್ಕೇ ಇಲ್ಲ ಅಂದರೆ ಹೇಗೆ, ಪರಿಶಿಷ್ಟರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, 70 ವರ್ಷಗಳಿಂದ ನಡೆದು ಬಂದಿದ್ದ ಸಾಮಾಜಿಕ ನ್ಯಾಯಕ್ಕೆ ಕೊಡಲಿ ಪೆಟ್ಟು ನೀಡುವುದು ಸರಿಯಲ್ಲ. ಮೀಸಲಾತಿ ರದ್ದು ಪ್ರಯತ್ನಗಳ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಮೀಸಲಾತಿ ನೀಡುವುದು ರಾಜ್ಯ ಸರಕಾರಗಳಿಗೆ ಬಿಟ್ಟ ವಿಚಾರ. ಆದರೆ, ಮೀಸಲಾತಿ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಇಂಥ ತೀರ್ಪುಗಳು ಬರಲು ಉತ್ತರಾಖಂಡ ಸರಕಾರವೇ ಕಾರಣ. ಈಗ ಉತ್ತರ ಪ್ರದೇಶ ಸಹ ಈ ತೀರ್ಪನ್ನು ಅನುಸರಿಸಲು ಮುಂದಾಗುತ್ತಿದೆ. ಇದು ನಿಜಕ್ಕೂ ಅನಾಹುತಕಾರಿ ಬೆಳವಣಿಗೆಯಾಗಿದ್ದು, ಸುಪ್ರೀಂ ತೀರ್ಪು ಸರಿಯಲ್ಲ. ಹೀಗಾಗಿ ಕೇಂದ್ರ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News