ಸಿದ್ದಾಪುರ: 2ನೇ ದಿನಕ್ಕೆ ಕಾಲಿಟ್ಟ ಪ್ರವಾಹ ಸಂತ್ರಸ್ತರ ಅಹೋರಾತ್ರಿ ಪ್ರತಿಭಟನೆ

Update: 2020-02-11 14:24 GMT

ಸಿದ್ದಾಪುರ, ಫೆ.11: ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರವಾಹಕ್ಕೆ ಕಾವೇರಿ ನದಿ ದಡದ ನಿವಾಸಿಗಳು ಆಸ್ತಿ ಪಾಸ್ತಿ ಕಳೆದುಕೊಂಡು ಸಂಕಷ್ಟದ ಬದುಕು ಎದುರಿಸುತ್ತಿದ್ದು, ಸಂತ್ರಸ್ತರಿಗೆ ಶಾಶ್ವತ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿ ಸಿದ್ದಾಪುರ ಗ್ರಾಮ ಪಂಚಾಯತ್ ಮುಂದೆ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಎರಡನೇ ದಿನ ಪೂರೈಸಿದ್ದು, ಸಂತ್ರಸ್ತರ ಪ್ರತಿಭಟನೆಗೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಕೈಜೋಡಿಸಿವೆ.

ಸೋಮವಾರ ಬೆಳಗ್ಗೆ ಆರಂಭವಾದ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಸೋಮವಾರ ತಡರಾತ್ರಿಯವರೆಗೂ ಕ್ರಾಂತಿಗೀತೆಗಳನ್ನು ಹಾಡಿದ ಪ್ರತಿಭಟನಾಕಾರರು, ಜಿಲ್ಲಾಡಳಿತ ಹಾಗೂ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಅಹೋರಾತ್ರಿ ಹೋರಾಟಕ್ಕೆ ಬೆಂಬಲ ಸೂಚಿಸಿ ರಾತ್ರಿ ವೇಳೆಯಲ್ಲಿ ಆಗಮಿಸಿದ ಮಡಿಕೇರಿ ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸದೆ ಜಿಲ್ಲಾಡಳಿತ ಹಾಗೂ ಅಧಿಕಾರಿ ಜನಪ್ರತಿನಿಧಿಗಳು ಕಡೆಗಣಿಸಿದ್ದಾರೆ. ದಾನಿಗಳ ನೆರವಿನಿಂದ ಅದೆಷ್ಟೋ ಕುಟುಂಬಗಳು ಬದುಕು ಸಾಗಿಸುತ್ತಿವೆ. ಮೂರು ತಿಂಗಳ ಹಿಂದೆ ಸಿದ್ದಾಪುರದಲ್ಲಿ ನಡೆದ ಶಾಶ್ವತ ಸೂರಿನ ಹೋರಾಟ ಸಂದರ್ಭದಲ್ಲಿ ಜಿಲ್ಲಾಡಳಿತ ಭರವಸೆ ನೀಡಿದ್ದು ಇದೀಗ ಹುಸಿಯಾಗಿದೆ. ಸಂಕಷ್ಟದಲ್ಲಿರುವ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸಂಸದರು, ಶಾಸಕರು, ಎಂಎಲ್ಸಿಗಳು ಹಾಗೂ ಜಿಲ್ಲಾಡಳಿತ ಮೌನವಾಗಿದೆ ಎಂದು ಆರೋಪಿಸಿದರು.

ಪ್ರವಾಹದ ನಂತರ ಶಾಶ್ವತ ಸೂರಿಲ್ಲದೆ ವಯೋವೃದ್ಧರು ಹಾಗೂ ಮಕ್ಕಳೊಂದಿಗೆ ಚಳಿ ಗಾಳಿ ಬಿಸಿಲನ್ನು ಲೆಕ್ಕಿಸದೆ ಬದುಕುತ್ತಿರುವ ಸಂಕಷ್ಟದಲ್ಲಿರುವ  ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಂಗಳವಾರ ಪ್ರತಿಭಟನೆಗೆ ಸಿಪಿಐಎಂ, ಸಿಐಟಿಯು, ಆಟೋ ಚಾಲಕರ ಸಂಘ, ಎಸ್ಡಿಪಿಐ ಜಿಲ್ಲಾ ಸಮಿತಿ, ಮಡಿಕೇರಿ ರಕ್ಷಣೆ ವೇದಿಕೆ, ನಮ್ಮ ಕೊಡಗು ತಂಡ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಾಥ್ ನೀಡಿದ್ದು, ಗುಹ್ಯ, ಕರಡಿಗೋಡುವಿನ ಸಂತ್ರಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಹೋರಾಟದಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ ರಮೇಶ್, ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಶೌಕತ್ ಆಲಿ, ಸಿಪಿಐಎಂ ಸಿದ್ದಾಪುರ ಗ್ರಾಮ ಸಮಿತಿ ಕಾರ್ಯದರ್ಶಿ ಎನ್.ಡಿ ಕುಟ್ಟಪ್ಪ ಮಾತನಾಡಿದರು.

ಹೋರಾಟಕ್ಕೆ ಸಿದ್ದಾಪುರ ಆಟೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಎಂ.ಆರ್ ಸಲೀಂ, ಹನಫಿ ಮದೀಸಿಯ ಅಧ್ಯಕ್ಷ ವಾಜೀದ್, ಸ್ತ್ರೀಶಕ್ತಿ ಸಂಘ, ಒಡಿಪಿ ಸಂಸ್ಥೆ ಬೆಂಬಲ ಸೂಚಿಸಿದ್ದು, ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಹೋರಾಟವು ಮಂಗಳವಾರ ರಾತ್ರಿಯೂ ಮುಂದುವರೆದಿದ್ದು, ಶೀಘ್ರದಲ್ಲಿ ಶಾಶ್ವತ ನಿವೇಶನ ಒದಗಿಸಲು ಹೋರಾಟ ಸಮಿತಿಯು ಒತ್ತಾಯಿಸಿದೆ. ಸಂತ್ರಸ್ತರು ಸ್ಥಳದಲ್ಲೇ ಉಪಹಾರ, ಊಟ, ಕಾಫಿಯನ್ನು ತಯಾರಿಸಿ ಸೇವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News