ಶಾಹಿನ್ ಶಾಲೆ ವಿರುದ್ಧ ದೇಶದ್ರೋಹ ಪ್ರಕರಣ: ಎರಡು ಬಣಗಳಾದ ವಕೀಲರು

Update: 2020-02-11 15:03 GMT

ಬೀದರ,ಫೆ.11: ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲೆಯಲ್ಲಿ ಕಳೆದ ತಿಂಗಳು ಸಿಎಎ ಮತ್ತು ಎನ್‌ಆರ್‌ಸಿಯನ್ನು ಟೀಕಿಸಿ ನಾಟಕ ಪ್ರದರ್ಶನ ನಡೆದ ಬಳಿಕ ಶಾಲೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಇದರ ಪರಿಣಾಮ ಇಲ್ಲಿನ ವಕೀಲ ವೃಂದದ ಮೇಲೂ ಉಂಟಾಗಿದೆ. ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಶಾಹೀನ್ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿ,ನಾಟಕದಲ್ಲಿ ಪಾತ್ರ ವಹಿಸಿದ್ದ ಮಗುವಿನ ತಾಯಿ ಮತ್ತು ಶಾಲಾ ಆಡಳಿತ ಮಂಡಳಿಯ ಪರ ವಕಾಲತ್ ವಹಿಸದಿರಲು ವಕೀಲರ ಒಂದು ಗುಂಪು ನಿರ್ಧರಿಸಿದ್ದರೆ,ಇನ್ನೊಂದು ಗುಂಪು ಅವರ ಪರವಾಗಿ ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸಲು ಸಜ್ಜಾಗಿದೆ ಎಂದು quint.com ವರದಿ ತಿಳಿಸಿದೆ.

ಫೆ.5ರಂದು ಬೀದರ್ ಬಾರ್ ಅಸೋಸಿಯೇಷನ್‌ನ ಸಭೆ ನಡೆದಿದ್ದು,ಸುಮಾರು 25 ವಕೀಲರು ಬಂಧಿತ ಮಹಿಳೆಯರನ್ನು ಮತ್ತು ಶಾಲಾಡಳಿತವನ್ನು ಯಾರೂ ನ್ಯಾಯಾಲಯದಲ್ಲಿ ಪ್ರತಿನಿಧಿಸಬಾರದು ಎಂಬ ನಿರ್ಣಯವನ್ನು ಅಂಗೀಕಾರಗೊಳಿಸಲು ಯತ್ನಿಸಿದ್ದರು. ನಿರ್ಣಯವನ್ನ್ನು ಮಂಡಿಸಿದಾಗ ಸಭೆಯಲ್ಲಿ ವಾದವಿವಾದಗಳು ಉಂಟಾಗಿದ್ದು,ಒಂದು ಗುಂಪು ಅದನ್ನು ಬೆಂಬಲಿಸಿದ್ದರೆ ಇನ್ನೊಂದು ಗುಂಪು ತೀವ್ರವಾಗಿ ವಿರೋಧಿಸಿತ್ತು. ಸಭೆಯು ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ಸುಮಾರು 30 ವಕೀಲರ ಗುಂಪು ದೂರುದಾರ,ಎಬಿವಿಪಿ ಕಾರ್ಯಕರ್ತ ಎನ್ನಲಾಗಿರುವ ನಿಲೇಶ ರಕ್ಷಲ್‌ಗೆ ಬೆಂಬಲಿಸಿ ಪ್ರಾಸಿಕ್ಯೂಷನ್‌ಗೆ ನೆರವಾಗಲು ನಿರ್ಧರಿಸಿದ್ದರೆ, ಕೇಶವರಾವ್ ಶ್ರೀಮಲೆ ಮತ್ತು ಎಸ್.ಅರವಿಂದ ಸೇರಿದಂತೆ ಇನ್ನೊಂದು ಗುಂಪು ಆರೋಪಿಗಳ ಪರ ವಕಾಲತ್ ವಹಿಸಲು ನಿರ್ಧರಿಸಿದೆ.

‘ನಮಗೆ ವೈಯಕ್ತಿಕವಾಗಿ ರಕ್ಷಲ್ ಪರಿಚಯವಿಲ್ಲ. ಆದರೆ ದೂರುದಾರ ಯಾವುದೇ ಪಕ್ಷಕ್ಕೆ ಸೇರಿದ್ದರೂ ನಮ್ಮ ಬೆಂಬಲವಿದೆ. ಶಾಲೆಗಳಲ್ಲಿ ಇಂತಹ ದೇಶವಿರೋಧಿ ವಿಷಯಗಳನ್ನು ಬೋಧಿಸಬಾರದು. ಕಾಯ್ದೆಯನ್ನು ಅವರು ಶಾಲೆಯ ಹೊರಗೆ ವಿರೋಧಿಸಲಿ,ಆದರೆ ದೇಶದ ಪ್ರಧಾನಿಯನ್ನು ಅವರು ಅವಮಾನಿಸಬಾರದು. ಅದು ಶಾಲೆಯೋ ಅಥವಾ ರಾಜಕೀಯ ಪಕ್ಷವೋ’ ಎಂದು ದೂರುದಾರನನ್ನು ಬೆಂಬಲಿಸಲು ನಿರ್ಧರಿಸಿರುವ ವಕೀಲರ ಗುಂಪಿನ ಅನಿಲ್ ಕುಮಾರ್ ಪ್ರಶ್ನಿಸಿದರು.

   ಕಾನೂನಿನ ಕುರಿತು ಬೋಧನೆ ವಿವಿ ವಿದ್ಯಾರ್ಥಿಗಳಿಗೆ ಸೀಮಿತವಾಗಿರಬೇಕು ಮತ್ತು ಅರ್ಥೈಸಿಕೊಳ್ಳದ ಶಕ್ತಿಯಿಲ್ಲದ ಪ್ರಾಥಮಿಕ ಶಾಲಾ ಮಕ್ಕಳಿಗೆ ಅಲ್ಲ ಎಂದರು.

ದೂರನ್ನು ಬೆಂಬಲಿಸುವ ವಕೀಲರ ಕ್ರಮವನ್ನು ಅನಗತ್ಯ ಎಂದು ಬಣ್ಣಿಸಿದ ಶ್ರೀಮಲೆ,ಬಾರ್ ಸಭೆಯಲ್ಲಿ ಮಂಡಿಸಲಾಗಿದ್ದ ನಿರ್ಣಯವು ಕೇವಲ ಪ್ರಕರಣಕ್ಕೆ ಹೆಚ್ಚು ಪ್ರಚಾರ ನೀಡುವ ಮತ್ತು ಶಾಹೀನ್ ಶಾಲೆಗೆ ಕೆಟ್ಟ ಹೆಸರು ತರುವ ಒಂದು ಪ್ರಯತ್ನವಾಗಿದೆಯಷ್ಟೇ  ಎಂದು ಹೇಳಿದರು.

   ಎಫ್‌ಐಆರ್‌ನಲ್ಲಿ ದೇಶದ್ರೋಹ ಪ್ರಕರಣವನ್ನು ಉಲ್ಲೇಖಿಸುವ ಮುನ್ನ ಪೊಲೀಸರು ಮೇಲಧಿಕಾರಿಗಳಿಂದ ಪೂರ್ವಾನುಮತಿಯನ್ನು ಪಡೆದುಕೊಂಡಿರಬೇಕು. ಎಸ್‌ಪಿ ಅಥವಾ ಡಿವೈಎಸ್‌ಪಿ ದರ್ಜೆಯ ಅಧಿಕಾರಿಯು ವಿವರಣೆಯನ್ನು ಕೇಳಬೇಕು ಮತ್ತು ವಿವರಣೆಯು ತೃಪ್ತಿದಾಯಕವಾಗಿದ್ದರೆ ಮಾತ್ರ ಅನುಮತಿಯನ್ನು ನೀಡಬಹುದಾಗಿದೆ. ಆದರೆ ಶಾಹೀನ್ ಶಾಲೆಯ ಪ್ರಕರಣದಲ್ಲಿ ಈ ಪ್ರಕ್ರಿಯೆಯನ್ನು ಪಾಲಿಸಲಾಗಿರುವ ಬಗ್ಗೆ ಶ್ರೀಮಲೆ ಶಂಕೆಯನ್ನು ವ್ಯಕ್ತಪಡಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News