ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ: ಎರಡನೇ ಸ್ಥಾನಕ್ಕೆ ಕುಸಿದ ಬಿಜೆಪಿ

Update: 2020-02-11 15:29 GMT

ಬೆಂಗಳೂರು, ಫೆ.11: ರಾಜ್ಯದ ವಿವಿಧ ಆರು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತರೂಢ ಬಿಜಿಪಿ ಎರಡನೆ ಸ್ಥಾನಕ್ಕೆ ಕುಸಿದಿದ್ದು, ವಿಪಕ್ಷ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಮೊದಲನೇ ಸ್ಥಾನದಲ್ಲಿದ್ದರೆ, ಜೆಡಿಎಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ರಾಜ್ಯದ 6 ಸ್ಥಳೀಯ ಸಂಸ್ಥೆಗಳ 167 ವಾರ್ಡ್‌ಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 69, ಬಿಜೆಪಿ 59, ಜೆಡಿಎಸ್ 15, ಭಾರತೀಯ ಪ್ರಜಾ ಪಕ್ಷ 7, ಎಸ್‌ಡಿಪಿಐ 3 ಹಾಗೂ ಪಕ್ಷೇತರರು 14 ವಾರ್ಡ್‌ಗಳಲ್ಲಿ ವಿಜೇತರಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರಸಭೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೇರಿದೆ. ಉಳಿದಂತೆ ಭಾ.ಪ್ರ.ಪ 7, ಎಸ್‌ಡಿಪಿಐ 1 ಹಾಗೂ ಪಕ್ಷೇತರರು ಒಂದು ಸ್ಥಾನ ಪಡೆದಿದ್ದಾರೆ. ಚಿಕ್ಕಬಳ್ಳಾಪುರದ ನಗರಸಭೆಯಲ್ಲಿ ಕಾಂಗ್ರೆಸ್ 16 ಸ್ಥಾನ ಪಡೆದು ಅಧಿಕಾರ ಪಡೆದಿದೆ. ಇನ್ನು, ಬಿಜೆಪಿ 9, ಜೆಡಿಎಸ್ 2, ಪಕ್ಷೇತರರು 4 ಸ್ಥಾನಗಳಲ್ಲಿ ವಿಜೇತರಾಗಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರು ನಗರಸಭೆಯಲ್ಲಿ ಕಾಂಗ್ರೆಸ್ 14, ಬಿಜೆಪಿ 3, ಜೆಡಿಎಸ್ 7, ಎಸ್‌ಡಿಪಿಐ 2 ಹಾಗೂ ಪಕ್ಷೇತರರು 5 ಸ್ಥಾನಗಳು ಪಡೆದಿದ್ದು, ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಬಳ್ಳಾರಿಯ ಸಿರಗುಪ್ಪ ನಗರಸಭೆಯಲ್ಲಿ ಕಾಂಗ್ರೆಸ್ 19 ಸ್ಥಾನಗಳು ಪಡೆಯುವ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದೆ. ಇನ್ನು, ಬಿಜೆಪಿ 11, ಪಕ್ಷೇತರರು 1 ಸ್ಥಾನದಲ್ಲಿ ಗೆದ್ದಿದ್ದಾರೆ. ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯತ್‌ನಲ್ಲಿ 11 ಸ್ಥಾನ ಪಡೆದು ಬಿಜೆಪಿ ಅಧಿಕಾರ ಪಡೆದಿದೆ. ಕಾಂಗ್ರೆಸ್ 9 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಉಳಿದಂತೆ ವಿಜಯಪುರ ಜಿಲ್ಲೆಯ ಸಿಂದಗಿ ಪುರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 3, ಜೆಡಿಎಸ್ 6, ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆದ್ದಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಉಪ ಚುನಾವಣೆ: ಮೈಸೂರು ಮಹಾನಗರ ಪಾಲಿಕೆ, ಖಾನಾಪುರ ಪಟ್ಟಣ ಪಂಚಾಯತ್, ಹಿರೇಕೆರೂರ ಪಟ್ಟಣ ಪಂಚಾಯತ್‌ನ ಒಂದೊಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಲ್ಲ ಕಡೆ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಂಚಾಯತ್ ಉಪ ಚುನಾವಣೆ: ಹುಕ್ಕೇರಿ ತಾಲೂಕಿನ ಹೆಬ್ಬಾಳ ಜಿಲ್ಲಾ ಪಂಚಾಯತ್‌ಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಇನ್ನು, ತಾಲೂಕು ಪಂಚಾಯತ್‌ನಲ್ಲಿ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ, ಚೆನ್ನಪಟ್ಟಣದ ಮತ್ತಿಕೆರೆಯಲ್ಲಿ ಸ್ವತಂತ್ರ ಅಭ್ಯರ್ಥಿ, ಮಾಲೂರಿನ ಲಕ್ಕೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಚಿಂತಾಮಣಿಯ ಕುರುಬೂರುನಲ್ಲಿ ಭಾ.ಪ್ರ.ಪ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

ಗೌರಿಬಿದನೂರಿನ ಅಲಕಾಪುರದಲ್ಲಿ ಸ್ವತಂತ್ರ ಅಭ್ಯರ್ಥಿ ಹಾಗೂ ಶ್ಯಾಂಪುರದಲ್ಲಿ ಬಿಜೆಪಿ ಅಭ್ಯರ್ಥಿ, ರಾಮದುರ್ಗದ ಕಟಕೋಳದಲ್ಲಿ ಬಿಜೆಪಿ ಅಭ್ಯರ್ಥಿ, ಹಾನಗಲ್‌ನ ತಿಳವಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಸಿರಗುಪ್ಪದ ಕರೂರುನಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News