ಫೆ.15ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ತೀರ್ಮಾನ: ಕಾರಣ ಇಲ್ಲಿದೆ...

Update: 2020-02-11 16:51 GMT

ಬೆಂಗಳೂರು, ಫೆ. 11: ಭಡ್ತಿ ಮೀಸಲಾತಿ ಸಂಬಂಧದ ಸುಪ್ರೀಂ ಕೋರ್ಟ್ ತೀರ್ಪು, ದೇಶದ್ರೋಹದ ಪ್ರಕರಣ ಸೇರಿದಂತೆ ರಾಜ್ಯ ಸರಕಾರದ ವೈಫಲ್ಯಗಳು ಮತ್ತು ಕೀಳುಮಟ್ಟದ ರಾಜಕಾರಣ ಖಂಡಿಸಿ ಫೆ.15ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.

ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಜ್ಯದ ಪೊಲೀಸರಿಗೆ ಯಾವ ಪ್ರಕರಣಕ್ಕೆ ಯಾವ ಮೊಕದ್ದಮೆ ದಾಖಲಿಸಬೇಕು ಎಂದು ಆಲೋಚಿಸುತ್ತಿಲ್ಲ. ಪ್ರತಿಭಟನೆ ನಡೆಸುವ ಶಾಲಾ ಮಕ್ಕಳ, ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆ ಮೇಲೆ ಯಾವುದೇ ಕೇಸು ಹಾಕುವುದಿಲ್ಲ. ಆದರೆ, ಯು.ಟಿ.ಖಾದರ್, ಶಾಹೀನ್ ಸ್ಕೂಲ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ವಿರೋಧಿಗಳ ಬಾಯಿ ಮುಚ್ಚಿಸುವ ತಂತ್ರ ಸಲ್ಲ ಎಂದು ಆಕ್ಷೇಪಿಸಿದ ಅವರು, ಶಾಸಕ ರೇಣುಕಾಚಾರ್ಯ ಮನಸೋ ಇಚ್ಛೆ ಹೇಳಿಕೆ ನೀಡಬಹುದೇ? ಎಂದು ಪ್ರಶ್ನಿಸಿದರು.

‘ಮೀಸಲಾತಿ ಮೂಲಭೂತ ಹಕ್ಕಲ್ಲ’ ಎಂಬ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಆ ಮೂಲಕ ಕೇಂದ್ರ ಪರಿಶಿಷ್ಟರ ಮೀಸಲಾತಿ ಕಡಿತಕ್ಕೆ ಮುಂದಾಗಿದೆ ಎಂದು ದೂರಿದರು.

ಸಭೆಯಲ್ಲಿ ಮಾಜಿ ಸಚಿವರಾದ ಝಮೀರ್ ಅಹ್ಮದ್ ಖಾನ್, ಯು.ಟಿ.ಖಾದರ್, ಶಾಸಕ ಹಾರಿಸ್, ಮಾಜಿ ಶಾಸಕ ಅಶೋಕ್ ಪಟ್ಟಣ್, ಪರಿಷತ್ ಸದಸ್ಯ ವೇಣುಗೋಪಾಲ್, ಲಕ್ಷ್ಮಿನಾರಾಯಣ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News